ಗಣೇಶ ಮೆರವಣಿಗೆ ಮೇಲೆ ಟ್ರಕ್ ಹರಿದು 9 ಮಂದಿ ಸಾ*ವು: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

0 (22)

ಹಾಸನ: ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಭೀಕರ ದುರಂತ ಸಂಭವಿಸಿದೆ. ಟ್ರಕ್ ಒಂದು ಏಕಾಏಕಿ ಡಿವೈಡರ್ ದಾಟಿ ಮೆರವಣಿಗೆಯ ಮೇಲೆ ಹರಿದ ಪರಿಣಾಮ 9 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಣೇಶ ವಿಸರ್ಜನೆಗಾಗಿ ಮೊಸಳೆಹೊಸಹಳ್ಳಿ ಗ್ರಾಮಸ್ಥರು ರಸ್ತೆಯ ಒಂದು ಬದಿಯಲ್ಲಿ ಮೆರವಣಿಗೆಯೊಂದಿಗೆ ಸಾಗುತ್ತಿದ್ದಾಗ, ಟ್ರಕ್ ವೇಗವಾಗಿ ಬಂದು ಜನರ ಮೇಲೆ ಢಿಕ್ಕಿಹೊಡೆದಿದೆ. ಈ ಘಟನೆಯಿಂದ ಟ್ರಕ್‌ಗೆ ಸಿಲುಕಿದ 4 ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ವೇಳೆ 5 ಜನ ಮೃತಪಟ್ಟಿದ್ದಾರೆ.

ಸರ್ಕಾರದಿಂದ ಪರಿಹಾರ ಘೋಷಣೆ:

ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ದುಃಖದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಸೂಚಿಸಿದ್ದಾರೆ. “ಹಾಸನದ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆಯ ಮೇಲೆ ಟ್ರಕ್ ಡಿಕ್ಕಿಯಿಂದ 9 ಜನ ಸಾವನ್ನಪ್ಪಿರುವುದು ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ದುಃಖವಾಯಿತು.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರವು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ. ಈ ದುಃಖದ ಘಳಿಗೆಯಲ್ಲಿ ಸಂತ್ರಸ್ತರ ಜೊತೆ ನಾವೆಲ್ಲರೂ ಇದ್ದೇವೆ,” ಎಂದು ಸಿಎಂ ಹೇಳಿದ್ದಾರೆ.

ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗಾಗಿ ಸರ್ಕಾರವು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು, ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.

Exit mobile version