ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಜೊತೆಗೆ ಅಪರಾಧಿಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿದೆ. ಈ ತೀರ್ಪಿನಿಂದ ಜಾಮೀನಿನ ಮೇಲೆ ಹೊರಗಿದ್ದ ಶಾಸಕರಿಗೆ ಕಾನೂನು ಸಂಕಷ್ಟ ಎದುರಾಗಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದ ಈ ಅಕ್ರಮ ಗಣಿಗಾರಿಕೆ ಪ್ರಕರಣವು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಸುದೀರ್ಘ 13 ವರ್ಷಗಳ ಕಾಲ ನಡೆದ ವಿಚಾರಣೆಯ ಬಳಿಕ, ಸಿಬಿಐ ನ್ಯಾಯಾಲಯವು ಇಂದು ಈ ತೀರ್ಪನ್ನು ಘೋಷಿಸಿದೆ.
ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೊತೆಗೆ ಬಿ.ವಿ. ಶ್ರೀನಿವಾಸ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 120ಬಿ (ಕ್ರಿಮಿನಲ್ ಸಂಚು), 420 (ವಂಚನೆ), 409 (ಕ್ರಿಮಿನಲ್ ದುರುಪಯೋಗ), 468 (ಕೂಟರಚನೆ), 471 (ಕೂಟ ದಾಖಲೆ ಬಳಕೆ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಮತ್ತು 13(1)(ಡಿ) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ಈ ಆರೋಪಗಳ ಕುರಿತು ನ್ಯಾಯಾಲಯವು ವಾದ-ಪ್ರತಿವಾದಗಳನ್ನು ಆಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ತೀರ್ಪು ನೀಡಿದೆ.
ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ನ್ಯಾಯಾಲಯವು 3,000ಕ್ಕೂ ಅಧಿಕ ದಾಖಲೆಗಳನ್ನು ಪರಿಶೀಲಿಸಿದ್ದು, 219 ಸಾಕ್ಷಿಗಳ ವಿಚಾರಣೆಯನ್ನು ನಡೆಸಿತು. ಓಬಳಾಪುರಂನಲ್ಲಿ ನಡೆದ ಅಕ್ರಮ ಗಣಿಗಾರಿಕೆಯು ಕಾನೂನುಬಾಹಿರ ಚಟುವಟಿಕೆಗಳಿಂದ ಕೂಡಿತ್ತು ಎಂದು ಆರೋಪಿಸಲಾಗಿತ್ತು. ಈ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟವಾಗಿದೆ ಎಂದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿತ್ತು. ಜನಾರ್ದನ ರೆಡ್ಡಿಯವರ ಒಡೆತನದ ಒಬಳಾಪುರಂ ಮೈನಿಂಗ್ ಕಂಪನಿಯು ಕಾನೂನು ಮೀರಿ ಗಣಿಗಾರಿಕೆಯಲ್ಲಿ ತೊಡಗಿತ್ತು ಎಂಬುದು ಆರೋಪವಾಗಿತ್ತು.
ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಪ್ರಕರಣದಿಂದಾಗಿ ಅವರ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ತೀರ್ಪಿನ ಬಳಿಕ ರೆಡ್ಡಿಯವರ ಕಾನೂನು ತಂಡವು ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ತೀರ್ಪು ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.