ಕಲಬುರಗಿ: ಜಮೀನಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಅಪರಿಚಿತ ದುಷ್ಕರ್ಮಿಗಳು ತಲ್ವಾರಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಕಲಬುರಗಿಯ ಸೀತನೂರು ಗ್ರಾಮದ ಸೇತುವೆ ಬಳಿ ನಡೆದಿದೆ. 65 ವರ್ಷದ ಶಿವರಾಯ ಮಾಲಿ ಪಾಟೀಲ್ ಎಂಬ ವೃದ್ಧನನ್ನು ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಶಿವರಾಯ ಮಾಲಿ ಪಾಟೀಲ್ ಅವರು ತಮ್ಮ ಜಮೀನಿನಲ್ಲಿ ದಿನನಿತ್ಯದ ಕೆಲಸದಲ್ಲಿ ತೊಡಗಿದ್ದರು. ಭಾನುವಾರ ಬೆಳಗ್ಗೆ ಕೆಲಸ ಮುಗಿಸಿ ಸೀತನೂರು ಗ್ರಾಮದ ಸೇತುವೆಯ ಮೂಲಕ ಮನೆಗೆ ಹಿಂದಿರುಗುತ್ತಿದ್ದಾಗ, ಈ ಘಟನೆ ಸಂಭವಿಸಿದೆ. ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಶಿವರಾಯ ಅವರ ಮೇಲೆ ತಲ್ವಾರಿನಿಂದ ದಾಳಿ ನಡೆಸಿದೆ. ವೃದ್ಧ ಶಿವರಾಯ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಈ ಕೊಲೆಗೆ ಹಳೇ ವೈಷಮ್ಯವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಕೊಲೆಗಾರರು ಯಾರು ಎಂಬುದು ಇನ್ನೂ ಗೊತ್ತಿಲ್ಲ. ಆದರೆ, ಕೊಲೆಯ ಉದ್ದೇಶ ಏನು ಎಂಬುದೂ ತಿಳಿದಿಲ್ಲ.
ಕಲಬುರಗಿ ನಗರದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಕನ್ನಿಕಾ ಸಿಖಿವಾಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರನ್ನು ಶೀಘ್ರವಾಗಿ ಬಂಧಿಸಲು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.