ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಬೃಹತ್ ವಂಚನೆ ನಡೆಸಿದ ಆರೋಪಿಯನ್ನು ಶಿವಮೊಗ್ಗ ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೈಸೂರು ಮೂಲದ ರಘುನಾಥ್ (ವಯಸ್ಸು 32) ಎಂದು ಗುರುತಿಸಲಾಗಿದೆ. ತಾನು ಸಚಿವ ಮಧು ಬಂಗಾರಪ್ಪ ಅವರ ವೈಯಕ್ತಿಕ ಸಹಾಯಕ (ಪಿಎ) ಎಂದು ನಟಿಸಿ, ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ, ಸಾರ್ವಜನಿಕರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದಾಗಿಯೂ ಭರವಸೆ ನೀಡಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ ಆರೋಪವಿದೆ.
ರಘುನಾಥ್, ಬೆಂಗಳೂರಿನ ಸೆಂಟ್ರಲ್‌ನಲ್ಲಿ ವಾಸವಾಗಿದ್ದು, ಕಾಂಗ್ರೆಸ್‌ನ ಎನ್‌ಎಸ್‌ಯುಐ ಮುಖಂಡ ಎಂದು ಸ್ವಯಂ ಘೋಷಿತವಾಗಿ ತಿರುಗಾಡುತ್ತಿದ್ದ. ಈತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಭಾರತಿ ಅವರಿಗೆ ಕರೆ ಮಾಡಿ, “ನಿಮಗೆ ವರ್ಗಾವಣೆಯಾಗಿದೆ, ಆದರೆ ಸ್ಥಳ ತೋರಿಸಿಲ್ಲ. ಸಚಿವರೊಂದಿಗೆ ಮಾತನಾಡಿ ನಿಮ್ಮ ಕೆಲಸ ಮಾಡಿಕೊಡುವೆ” ಎಂದು ಭರವಸೆ ನೀಡಿದ್ದ. ಆದರೆ, ಈ ಕರೆಯಿಂದ ಅನುಮಾನಗೊಂಡ ಭಾರತಿ ಅವರು, ಸಚಿವರ ಆಪ್ತ ಸಹಾಯಕ ಶ್ರೀಪತಿ ಅವರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಶ್ರೀಪತಿ ಅವರು ತನಿಖೆ ನಡೆಸಿದಾಗ, ರಘುನಾಥ್ ಸಚಿವರ ಪಿಎ ಅಲ್ಲ ಎಂಬುದು ಸ್ಪಷ್ಟವಾಯಿತು.
ರಘುನಾಥ್ ತನ್ನ ಟ್ರೂಕಾಲರ್‌ನಲ್ಲಿ ಸಚಿವರ ಮನೆಯ ಆಪ್ತ ಸಹಾಯಕ ಎಂದು ನಮೂದಿಸಿಕೊಂಡಿದ್ದ. ಈತ ಸರ್ಕಾರಿ ನೌಕರರಿಗೆ ವರ್ಗಾವಣೆ ರದ್ದುಗೊಳಿಸುವುದಾಗಿ ಅಥವಾ ಸ್ಥಳಾಂತರ ಮಾಡಿಕೊಡುವುದಾಗಿ ಭರವಸೆ ನೀಡಿ, ಹಣವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಳ್ಳುತ್ತಿದ್ದ. ವರ್ಗಾವಣೆ ಪಟ್ಟಿಯನ್ನು ಪಡೆದು, ವರ್ಗಾವಣೆಯಾದವರಿಗೆ ಮತ್ತು ಸ್ಥಾನ ನಿಯುಕ್ತಿಯಾಗದವರಿಗೆ ಕರೆ ಮಾಡಿ, “ಸಚಿವರಿಗೆ ಮಾತನಾಡಿ ಪತ್ರ ತಯಾರಿಸಿದ್ದೇನೆ” ಎಂದು ಹೇಳಿ, ಹಣ ವಸೂಲಿ ಮಾಡುತ್ತಿದ್ದ. ಹಣ ಪಡೆದ ನಂತರ ಸಿಮ್ ಕಾರ್ಡ್ ಬದಲಾಯಿಸಿ, ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡು ಓಡಾಡುತ್ತಿದ್ದ.
ಈ ವಂಚನೆಯ ಬಗ್ಗೆ ಸಚಿವರ ವಿಶೇಷ ಅಧಿಕಾರಿ ಶ್ರೀಪತಿ ಅವರಿಗೆ ಮಾಹಿತಿ ದೊರೆತಾಗ, ಕಾಂಗ್ರೆಸ್ ಮುಖಂಡ ಗಿರೀಶ್ ಮೂಲಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ದೂರಿನ ಆಧಾರದ ಮೇಲೆ ಜಯನಗರ ಪೊಲೀಸರು ರಘುನಾಥ್‌ನನ್ನು ಬಂಧಿಸಿದರು. ಈಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.