ದಾವಣಗೆರೆ: ಯುವ ಸಮುದಾಯ ಇಂದು ತಂತ್ರಜ್ಞಾನ, ಉದ್ಯೋಗ ಮತ್ತು ಭೌತಿಕ ಸುಖಗಳ ಹಿಂದೆ ಓಡುತ್ತಿರುವ ಸಂದರ್ಭದಲ್ಲಿ, ದಾವಣಗೆರೆಯ ಯುವತಿ ಒಬ್ಬಳು ಸಂಪೂರ್ಣ ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾಳೆ. ದಾವಣಗೆರೆಯ ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಂಚಲ್ ಕುಮಾರಿ (26) ಇಂದು ಜೈನ ಸನ್ಯಾಸ ದೀಕ್ಷೆ ಸ್ವೀಕರಿಸುವ ಮೂಲಕ ಸಂಸಾರ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಆಂಚಲ್ ಕುಮಾರಿ ದಾವಣಗೆರೆಯ BIET (ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ) ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಓದಿ, ಟಾಪರ್ ಸ್ಟೂಡೆಂಟ್ ಆಗಿ ಗುರುತಿಸಿಕೊಂಡಿದ್ದರು. ವಿದ್ಯಾಭ್ಯಾಸದಲ್ಲಿ ಅಗ್ರಸ್ಥಾನ ಪಡೆದಿದ್ದ ಆಂಚಲ್ ಮುಂದೆ ಉಜ್ವಲ ಭವಿಷ್ಯ, ಉತ್ತಮ ಉದ್ಯೋಗ ಮತ್ತು ಸುಖಮಯ ಜೀವನ ಕಾದಿತ್ತು. ಆದರೆ, ಈ ಎಲ್ಲವನ್ನು ತ್ಯಜಿಸಿ ಆಧ್ಯಾತ್ಮದ ದಾರಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಕುಟುಂಬ ಹಿನ್ನೆಲೆ
ಆಂಚಲ್ ಕುಮಾರಿ ದಾವಣಗೆರೆ ಚೌಕಿಪೇಟೆಯ ಪ್ರಸಿದ್ಧ ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಅವರ ಪುತ್ರಿ. ಮುಕೇಶ್ ಅವರಿಗೆ ಮೂವರು ಪುತ್ರಿಯರು ಇದ್ದು, ಮೊದಲ ಇಬ್ಬರಿಗೆ ಈಗಾಗಲೇ ವಿವಾಹವಾಗಿದೆ. ಕುಟುಂಬದ ಎಲ್ಲ ಸದಸ್ಯರ ಪ್ರೀತಿ, ಬೆಂಬಲ ಮತ್ತು ಉಜ್ವಲ ಭವಿಷ್ಯವಿದ್ದರೂ, ಆಂಚಲ್ ತಮ್ಮ ಜೀವನದ ಉದ್ದೇಶ ಬೇರೆ ಎಂದು ನಿರ್ಧರಿಸಿದರು.
ಕಳೆದ ಕೆಲವು ವರ್ಷಗಳಿಂದ ಆಂಚಲ್ ಕುಮಾರಿಯಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಾಗತೊಡಗಿತ್ತು. ಜೈನ ಧರ್ಮದ ತತ್ವಗಳು, ಅಹಿಂಸೆ, ತ್ಯಾಗ ಮತ್ತು ಸಂಯಮದ ಜೀವನ ಶೈಲಿ ಅವರನ್ನು ಆಳವಾಗಿ ಪ್ರಭಾವಿತಗೊಳಿಸಿತು. ವಿಶೇಷವಾಗಿ ಜೈನ ಸನ್ಯಾಸಿಗಳ ಸರಳ ಜೀವನ, ಅವರ ಮುಖದಲ್ಲಿರುವ ಶಾಂತಿ ಮತ್ತು ನಗುವು ಆಂಚಲ್ ಅವರ ಮನಸ್ಸನ್ನು ಸ್ಪರ್ಶಿಸಿತು.
“ಸನ್ಯಾಸಿಗಳ ಮುಖದಲ್ಲಿರುವ ನಿಜವಾದ ಸಂತೋಷ ನನಗೆ ಆಳವಾದ ಪ್ರೇರಣೆ ನೀಡಿತು. ಸಂಸಾರದ ಸುಖಕ್ಕಿಂತ ಸನ್ಯಾಸತ್ವದ ಸುಖ ಹೆಚ್ಚು ಶಾಶ್ವತ ಎಂದು ಅನಿಸಿತು” ಎಂಬ ಭಾವನೆಯೇ ಈ ಮಹತ್ವದ ನಿರ್ಧಾರಕ್ಕೆ ಕಾರಣವಾಯಿತು ಎಂದು ಆಂಚಲ್ ಆಪ್ತರಿಗೆ ತಿಳಿಸಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ದೀಕ್ಷೆ
ಇಂದು ಗುಜರಾತ್‌ನ ಸೂರತ್ ನಗರದಲ್ಲಿ ಜೈನ ಧರ್ಮದ ಪ್ರಸಿದ್ಧ ಗುರುಗಳಾದ ಕುಲಚಂದ್ರ ಸುರೇಶ್ವರ್ಜಿ ಮಹಾರಾಜ್ ಅವರಿಂದ ಆಂಚಲ್ ಕುಮಾರಿ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿದ್ದಾರೆ. ಈ ದೀಕ್ಷೆಯೊಂದಿಗೆ ಅವರು ಸಂಪೂರ್ಣವಾಗಿ ಭೌತಿಕ ಜೀವನದಿಂದ ದೂರ ಸರಿದು, ತ್ಯಾಗ, ತಪಸ್ಸು ಮತ್ತು ಸೇವೆಯ ಮಾರ್ಗವನ್ನು ಅಳವಡಿಸಿಕೊಳ್ಳಲಿದ್ದಾರೆ.
ಆಂಚಲ್ ಕುಮಾರಿಯ ನಿರ್ಧಾರ ಇಂದು ಅನೇಕ ಯುವಕರಿಗೆ ಚಿಂತನೆಗೆ ಕಾರಣವಾಗಿದೆ. ಉದ್ಯೋಗ, ಹಣ ಮತ್ತು ಭೌತಿಕ ಸುಖಗಳಿಗಿಂತ ಜೀವನದ ಅರ್ಥ ಮತ್ತು ಆಂತರಿಕ ಶಾಂತಿ ಮುಖ್ಯ ಎಂಬ ಸಂದೇಶವನ್ನು ಅವರ ದೀಕ್ಷೆ ಸಾರುತ್ತಿದೆ.





