ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ (K.C. Veerendra Pappy) ಮತ್ತು ಅವರ ಸಹೋದರರ ಮನೆಗಳ ಮೇಲೆ ಶುಕ್ರವಾರ ಬೆಳಗ್ಗೆ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ಅಕ್ರಮ ಆಸ್ತಿ ಸಂಪಾದನೆ ಮತ್ತು ತೆರಿಗೆ ವಂಚನೆಯ ಪ್ರಕರಣಗಳ ತನಿಖೆಯ ಹಿನ್ನೆಲೆಯಲ್ಲಿ ನಡೆಸಲಾಗುತ್ತಿದೆಯೆಂದು ತಿಳಿದುಬಂದಿದೆ.
ಚಳ್ಳಕೆರೆಯ ಹಳೇ ಟೌನ್‌ನಲ್ಲಿರುವ ವೀರಭದ್ರ ಸ್ವಾಮಿ ದೇವಸ್ಥಾನದ ಸಮೀಪದ ನಾಲ್ಕು ಮನೆಗಳ ಮೇಲೆ ಈ ದಾಳಿ ನಡೆದಿದ್ದು, ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ದಾಳಿಯ ವಿವರ
ಬೆಳಗಿನ ಜಾವ 5 ಗಂಟೆ ಸುಮಾರಿಗೆ ಖಾಸಗಿ ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳ ತಂಡ, ಕೆ.ಸಿ. ವೀರೇಂದ್ರ ಮತ್ತು ಅವರ ಸಹೋದರರ ನಿವಾಸಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿತ್ತು. ಚಳ್ಳಕೆರೆ ಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದ ಬಳಿಯಿರುವ ಈ ಮನೆಗಳಲ್ಲಿ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು, ಆಸ್ತಿ ಗಳಿಕೆ ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಈ ದಾಳಿಯು ಕೆ.ಸಿ. ವೀರೇಂದ್ರ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಆರ್ಥಿಕ ಲಾವಾದೇವಿಗಳಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.
ಕೆ.ಸಿ. ವೀರೇಂದ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಶಾಸಕರಾಗಿದ್ದು, ಸ್ಥಳೀಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಡಿ ಅಧಿಕಾರಿಗಳು ದಾಖಲೆಗಳ ಜೊತೆಗೆ ಡಿಜಿಟಲ್ ಸಾಧನಗಳನ್ನು ಕೂಡ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ದಾಳಿಯಿಂದ ಸಂಗ್ರಹವಾದ ಮಾಹಿತಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳು ನಿರ್ಧಾರವಾಗಲಿವೆ ಎಂದು ತಿಳಿದುಬಂದಿದೆ.