ಚಿತ್ರದುರ್ಗ: ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಮೂರನೇ ಬಾರಿಗೆ ದಾಳಿ ನಡೆಸಿದ್ದು, ಕೋಟಿಗಟ್ಟಲೆ ಮೌಲ್ಯದ ಚಿನ್ನ, ಆಭರಣಗಳು ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ದಾಳಿಯಲ್ಲಿ ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರ ಬ್ಯಾಂಕ್, ಎಸ್‌ಬಿಐ, ಮತ್ತು ವೀರಶೈವ ಸಹಕಾರ ಬ್ಯಾಂಕ್‌ನ ಲಾಕರ್‌ಗಳನ್ನು ತಪಾಸಣೆಗೊಳಪಡಿಸಲಾಗಿದೆ.
ಚಳ್ಳಕೆರೆಯ ಆಕ್ಸಿಸ್ ಬ್ಯಾಂಕ್‌ನ ಲಾಕರ್‌ನಲ್ಲಿ 24.5 ಕೆ.ಜಿ. ಚಿನ್ನದ ಬಿಸ್ಕೇಟ್‌ಗಳು, 17 ಡೈಮಂಡ್ ರಿಂಗ್‌ಗಳು, ಮತ್ತು ಕೋಟಿಗಟ್ಟಲೆ ಮೌಲ್ಯದ ಆಭರಣಗಳು ಪತ್ತೆಯಾಗಿವೆ. ಕೊಟಕ್ ಮಹೀಂದ್ರ ಬ್ಯಾಂಕ್‌ನಲ್ಲಿ 5 ಕೆ.ಜಿ. ಚಿನ್ನದ ಒಡವೆಗಳು ಮತ್ತು ಎಸ್‌ಬಿಐ ಬ್ಯಾಂಕ್‌ನಲ್ಲಿ ಅಪಾರ ಮೌಲ್ಯದ ಚಿನ್ನಾಭರಣಗಳು ಹಾಗೂ ಆಸ್ತಿ ದಾಖಲೆಗಳು ಸಿಕ್ಕಿವೆ. ಒಟ್ಟು 17 ಬ್ಯಾಂಕ್ ಖಾತೆಗಳನ್ನು ಇಡಿ ತಪಾಸಣೆಗೊಳಪಡಿಸಿದ್ದು, ಈ ಖಾತೆಗಳ ಮೂಲಕ ದೇಶ-ವಿದೇಶಗಳಿಗೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಆಪ್‌ಗಳ ಮೂಲಕ ನಡೆದ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎನ್ನಲಾದ ಆರೋಪದ ಮೇಲೆ ಈ ದಾಳಿ ನಡೆದಿದೆ. ವೀರೇಂದ್ರ ಪಪ್ಪಿಯವರು ಕಡಿಮೆ ಅವಧಿಯಲ್ಲಿ ಸುಮಾರು 2,000 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ ಆರೋಪವಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಆಗಸ್ಟ್ 22 ರಂದು ಮೊದಲ ದಾಳಿ ನಡೆಸಿ, ಸಿಕ್ಕಿಂನಲ್ಲಿ ಪಪ್ಪಿಯವರನ್ನು ಬಂಧಿಸಿ ಐದು ದಿನಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಆ ಬಳಿಕ ಸೆಪ್ಟೆಂಬರ್ 2 ರಂದು ಎರಡನೇ ದಾಳಿಯಲ್ಲಿ ಆರು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು.
ಇಂದು ದಾಳಿ ನಡೆಸಿದ್ದು ವೀರೇಂದ್ರ ಪಪ್ಪಿಯ ನಿವಾಸದಿಂದ ಎರಡು ಬಟ್ಟೆ ಚೀಲಗಳಲ್ಲಿ ಚಿನ್ನ ಮತ್ತು ಅಮೂಲ್ಯ ದಾಖಲೆಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇಡಿ ಅಧಿಕಾರಿಗಳು ಚಳ್ಳಕೆರೆಯಿಂದ ಬೆಂಗಳೂರಿಗೆ ತೆರಳಿದ್ದು, ಎಸ್‌ಬಿಐ ಬ್ಯಾಂಕ್‌ನಲ್ಲಿ ಇನ್ನೂ ಎರಡು ಲಾಕರ್‌ಗಳ ತಪಾಸಣೆ ಬಾಕಿಯಿದೆ. ಮುಂದಿನ ದಿನಗಳಲ್ಲಿ ಮತ್ತೆ ಚಳ್ಳಕೆರೆಗೆ ಆಗಮಿಸಿ ಈ ಲಾಕರ್‌ಗಳನ್ನು ತೆರೆಯುವ ಸಾಧ್ಯತೆಯಿದೆ.





