ಮಂಗಳೂರು, ಸೆಪ್ಟೆಂಬರ್ 03: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಆರೋಪಿಸಿ ಸಂಚಲನ ಸೃಷ್ಟಿಸಿದ ಬುರುಡೆ ಪ್ರಕರಣಕ್ಕೆ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಅಧಿಕೃತವಾಗಿ ಪ್ರವೇಶಿಸಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಲು ವಿದೇಶಿ ಹಣದ ಸಂದಾಯವಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.
ಯೂಟ್ಯೂಬರ್‌ಗಳು, ಹೋರಾಟಗಾರರು ಮತ್ತು ಎರಡು ಎನ್‌ಜಿಒ ಸಂಸ್ಥೆಗಳ ಹಣಕಾಸು ಮೂಲಗಳನ್ನು ಪತ್ತೆಹಚ್ಚಲು ಇಡಿ ಮುಂದಾಗಿದೆ. ಮೊದಲ ಹಂತವಾಗಿ, ಕೆಲವು ಪ್ರಮುಖ ಬ್ಯಾಂಕ್‌ಗಳಿಗೆ ಪತ್ರ ಬರೆದು ಯೂಟ್ಯೂಬರ್‌ಗಳು, ಹೋರಾಟಗಾರರು ಮತ್ತು ಎನ್‌ಜಿಒಗಳ ಕಳೆದ ಐದು ವರ್ಷಗಳ ಬ್ಯಾಂಕ್ ವಹಿವಾಟು ವಿವರಗಳನ್ನು ಕೋರಿದೆ.
ಈ ಪ್ರಕರಣದಲ್ಲಿ ಆರೋಪಿಗಳಾದ ಚಿನ್ನಯ್ಯ ಅಲಿಯಾಸ್ ಮಾಸ್ಕ್ ಮ್ಯಾನ್, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣ ಸೇರಿದಂತೆ ಹಲವರ ಹಣಕಾಸು ವ್ಯವಹಾರಗಳ ಮೇಲೆ ಇಡಿ ಕಣ್ಣಿಟ್ಟಿದೆ. ವಿಶೇಷ ತನಿಖಾ ದಳ (ಎಸ್‌ಐಟಿ)ಯಿಂದಲೂ ಮಾಹಿತಿ ಕೋರಲಾಗಿದ್ದು, ಆರೋಪಿಗಳ ಅಕೌಂಟ್ ಟ್ರಾನ್ಸಾಕ್ಷನ್‌ಗಳ ಬಗ್ಗೆ ವಿವರಗಳನ್ನು ನೀಡುವಂತೆ ಸೂಚಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಇಡಿ ಎಂಟ್ರಿ ನೀಡಲಾಗಿದೆ.
ಇಡಿ ತನಿಖೆಯ ಹಿನ್ನೆಲೆ
ಧರ್ಮಸ್ಥಳದಲ್ಲಿ ಶವಗಳ ಮೂಳೆಗಳಿಗಾಗಿ ಎಸ್‌ಐಟಿ ಉತ್ಖನನ ನಡೆಸುವ ಸಂದರ್ಭದಲ್ಲಿ, ಯೂಟ್ಯೂಬರ್‌ಗಳು ಧರ್ಮಸ್ಥಳದ ವಿರುದ್ಧ ತೇಜೋವಧೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಅಪಪ್ರಚಾರಕ್ಕೆ ವಿದೇಶಿ ಫಂಡಿಂಗ್ ಸಾಧ್ಯತೆಯ ಬಗ್ಗೆ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಸುರೇಶ್ ಗೌಡ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರಗಳನ್ನು ಕೇಂದ್ರ ಗೃಹ ಸಚಿವಾಲಯ ಇಡಿಗೆ ವರ್ಗಾಯಿಸಿತ್ತು. ಬಿಜೆಪಿ, ಜೆಡಿಎಸ್ ಮುಖಂಡರು ಕೂಡ ಇಡಿ ಮತ್ತು ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು.
ಇದೀಗ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಾಕ್ಷ್ಯಗಳು ಸಿಕ್ಕರೆ, ಮನಿ ಲಾಂಡ್ರಿಂಗ್ ತಡೆ ಕಾಯ್ದೆ (ಪಿಎಮ್‌ಎಲ್‌ಎ) ಅಡಿಯಲ್ಲಿ ಅಧಿಕೃತ ಕೇಸ್ ದಾಖಲಿಸಿ ನೋಟಿಸ್ ನೀಡುವ ಸಾಧ್ಯತೆಯಿದೆ. ಈಗಾಗಲೇ ಯೂಟ್ಯೂಬರ್‌ಗಳು ಮತ್ತು ಹೋರಾಟಗಾರರ ಬ್ಯಾಂಕ್ ಖಾತೆಗಳ ವಿವರಗಳನ್ನು ಬ್ಯಾಂಕ್‌ಗಳಿಂದ ಕೋರಲಾಗಿದೆ. ಧರ್ಮಸ್ಥಳ ವಿರುದ್ಧ ಷಡ್ಯಂತರಕ್ಕಾಗಿ ವಿದೇಶದಿಂದ ಅಕ್ರಮ ಹಣಕಾಸು ನೆರವು ಪಡೆದಿದ್ದಾರೆ ಎಂಬ ಆರೋಪದ ಮೇಲೆ ಎರಡು ಎನ್‌ಜಿಒಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ.
ಪ್ರಕರಣದ ಹಿನ್ನೆಲೆ
ಕೆಲವು ತಿಂಗಳ ಹಿಂದೆ ಮುಸುಕುಧಾರಿ ಚಿನ್ನಯ್ಯ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿ ವೀಡಿಯೊ ಬಿಡುಗಡೆ ಮಾಡಿದ್ದರು. ಇದರಿಂದ ಸಂಚಲನ ಮೂಡಿದ್ದು, ಎಸ್‌ಐಟಿ ಉತ್ಖನನ ನಡೆಸಿತ್ತು. ಆದರೆ ಈ ಸಂದರ್ಭದಲ್ಲಿ ಯೂಟ್ಯೂಬರ್‌ಗಳು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಮತ್ತು ಭಕ್ತರು ಈ ಅಪಪ್ರಚಾರಕ್ಕೆ ವಿದೇಶಿ ಫಂಡ್ ಹರಿದುಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ಇಡಿ ತನಿಖೆಯ ಮೂಲಕ ಹಣದ ಮೂಲಗಳನ್ನು ಪತ್ತೆಹಚ್ಚಲು ಮುಂದಾಗಿದೆ. ಯೂಟ್ಯೂಬರ್ ಸಮೀರ್ ಸೇರಿದಂತೆ ಹಲವರು ಪೊಲೀಸ್ ಠಾಣೆಗೆ ಹಾಜರಾಗಿದ್ದರು.