ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದುಬಾರೆ ಸಾಕಾನೆ ಶಿಬಿರ ಐದು ತಿಂಗಳ ಬಳಿಕ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಆನೆಗಳ ಕಾಳಗದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಶಿಬಿರವನ್ನು ಇದೀಗ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳೊಂದಿಗೆ ಪುನಃ ತೆರೆಯಲಾಗಿದೆ. ಹೀಗಾಗಿ ದುಬಾರೆ ಸಾಕಾನೆ ಶಿಬಿರದಲ್ಲಿ ಮತ್ತೆ ಪ್ರವಾಸಿಗರ ಕಲರವ ಆರಂಭವಾಗಿದೆ.
ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರಕ್ಕೆ ಸದ್ಯ ಸೀಮಿತ ಅವಧಿಯಲ್ಲಿ ಮಾತ್ರ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ 9.30ರಿಂದ 11.30ರವರೆಗೆ ಪ್ರವಾಸಿಗರಿಗೆ ಶಿಬಿರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. 45 ನಿಮಿಷಗಳ ಅವಧಿಯಲ್ಲಿ ಗರಿಷ್ಠ 150 ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಪ್ರವಾಸಿಗರನ್ನು ತಲಾ 25 ಮಂದಿಯ ತಂಡಗಳಾಗಿ ವಿಂಗಡಿಸಿ, ಮಾರ್ಗದರ್ಶಕರೊಂದಿಗೆ ಶಿಬಿರದೊಳಗೆ ಕರೆದೊಯ್ಯಲಾಗುತ್ತದೆ.
ಪ್ರವಾಸಿಗರು ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆನೆಗಳಿಂದ ಸುಮಾರು 10 ಮೀಟರ್ ದೂರದಲ್ಲಿಯೇ ನಿಂತು ಅವುಗಳನ್ನು ವೀಕ್ಷಿಸಬೇಕಿದೆ. ಪ್ರವಾಸಿಗರು ಮತ್ತು ಆನೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆಗಳನ್ನು ಮುಟ್ಟುವುದು, ಅವುಗಳಿಗೆ ಆಹಾರ ನೀಡುವುದು ಹಾಗೂ ಸ್ನಾನ ಮಾಡಿಸುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಆನೆಗಳು ಮತ್ತು ಪ್ರವಾಸಿಗರ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಶಿಬಿರದ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮಾರ್ಗದರ್ಶಕರ ಸೂಚನೆಗಳನ್ನು ಪ್ರವಾಸಿಗರು ಕಡ್ಡಾಯವಾಗಿ ಪಾಲಿಸಬೇಕಾಗಿದ್ದು, ನಿಯಮ ಉಲ್ಲಂಘನೆಗೆ ಅವಕಾಶ ನೀಡದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಪ್ರವೇಶ ಶುಲ್ಕದಲ್ಲೂ ಬದಲಾವಣೆ
ಶಿಬಿರ ಪುನರಾರಂಭದ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಒಬ್ಬ ಪ್ರವಾಸಿಗರಿಗೆ 140 ರೂಪಾಯಿ, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ 160 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ದುಬಾರೆ ಶಿಬಿರದಲ್ಲಿ ಒಟ್ಟು 30 ಆನೆಗಳಿದ್ದು, ಸದ್ಯ 10 ಆನೆಗಳನ್ನು ಮಾತ್ರ ಪ್ರವಾಸಿಗರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ಆನೆ ಶಿಬಿರಗಳಿಗಾಗಿ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP)ವನ್ನು ಅನುಷ್ಠಾನಗೊಳಿಸಿದ ಬಳಿಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಇದೇ ವರ್ಷ ಜೂನ್ 1ರಂದು ದುಬಾರೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಎಂಬ ಸಾಕಾನೆಗಳ ನಡುವೆ ಕಾಳಗ ನಡೆದಿತ್ತು. ಈ ವೇಳೆ ಆನೆಗಳ ನಡುವೆ ಸಿಲುಕಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಕಾಳಗದಲ್ಲಿ ಗಾಯಗೊಂಡಿದ್ದ ಸಾಕಾನೆಯೂ ಬಳಿಕ ಮೃತಪಟ್ಟಿತ್ತು. ಘಟನೆಯ ಬಳಿಕ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಶಿಬಿರವನ್ನು ಬಂದ್ ಮಾಡಲಾಗಿತ್ತು.
ಐದು ತಿಂಗಳ ಬಳಿಕ ಇದೀಗ ಶಿಬಿರ ಪುನರಾರಂಭಗೊಂಡಿದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ಪ್ರವಾಸಿಗರ ವೀಕ್ಷಣಾ ಅವಧಿಯನ್ನು ಹೆಚ್ಚಿಸುವ ಕುರಿತು ಅರಣ್ಯ ಇಲಾಖೆ ನಿರ್ಧಾರ ಕೈಗೊಳ್ಳಲಿದೆ.





