ಬೆಂಗಳೂರು, ಮಾರ್ಚ್ 16: ದುಬೈ ವಿಮಾನ ನಿಲ್ದಾಣದ ಸಮೀಪ ನಡೆದ ಡ್ರೋನ್ ದಾಳಿ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಇದರ ಪರಿಣಾಮವಾಗಿ ಭಾರತದಿಂದ ದುಬೈಗೆ ತೆರಳಬೇಕಿದ್ದ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. ಪ್ರಮುಖವಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣ ಅಧಿಕಾರಿಗಳು ಭದ್ರತಾ ಕಾರಣಗಳಿಂದಾಗಿ ಕೆಲವು ವಿಮಾನ ಸಂಚಾರಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳಿಂದ ದುಬೈಗೆ ತೆರಳಬೇಕಿದ್ದ ವಿಮಾನಗಳ ವೇಳಾಪಟ್ಟಿ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಬೆಂಗಳೂರಿನಿಂದ 24 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ ಸೇರಿದಂತೆ ಮಧ್ಯಪ್ರಾಚ್ಯದ ವಿವಿಧ ದೇಶಗಳಿಗೆ ಹಾರಾಟ ನಡೆಸಬೇಕಿದ್ದ ಒಟ್ಟು 24 ವಿಮಾನಗಳು ರದ್ದಾಗಿವೆ. ಈ ಪೈಕಿ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 11 ವಿಮಾನಗಳು ಹಾಗೂ ಅರಬ್ ರಾಷ್ಟ್ರಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ 13 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.
ದುಬೈ ಮಾತ್ರವಲ್ಲದೆ ಅಬುಧಾಬಿ, ರಿಯಾದ್, ಜಿದ್ದಾ, ಡಮಾಮ್ ಮತ್ತು ದೋಹಾ ನಗರಗಳಿಂದ ಬೆಂಗಳೂರಿಗೆ ಬರಬೇಕಿದ್ದ ಹಲವು ವಿಮಾನಗಳೂ ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿರ್ಧಾರದಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿದ್ದು, ತಮ್ಮ ಮುಂದಿನ ಪ್ರಯಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲೂ ವಿಮಾನ ಸೇವೆ ವ್ಯತ್ಯಯ
ದುಬೈ ವಿಮಾನ ನಿಲ್ದಾಣದ ಬಳಿ ನಡೆದ ದಾಳಿಯ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕಾಣಿಸಿಕೊಂಡಿದೆ. ಮಂಗಳೂರಿನಿಂದ ದುಬೈ, ಡಮಾಮ್ ಮತ್ತು ಅಬುಧಾಬಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಸೇವೆ ಇಂದು ಮತ್ತು ನಾಳೆ ಸ್ಥಗಿತಗೊಂಡಿದೆ.
ವಿಮಾನಯಾನ ಸಂಸ್ಥೆಗಳು ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಸಿಗುವವರೆಗೆ ಕೆಲವು ವಿಮಾನಗಳನ್ನು ಹಾರಾಟಕ್ಕೆ ಅನುಮತಿಸದೇ ಇರುವುದಾಗಿ ತಿಳಿಸಿವೆ.
ಪ್ರಯಾಣಿಕರಿಗೆ ವಿಶೇಷ ಸೌಲಭ್ಯ
ವಿಮಾನ ರದ್ದಾದ ಹಿನ್ನೆಲೆ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ವಿಶೇಷ ಸೌಲಭ್ಯಗಳನ್ನು ನೀಡಿವೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಮುಂದಿನ ದಿನಾಂಕಕ್ಕೆ ಮರುನಿಗದಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಇದೇ ವೇಳೆ, ಪ್ರಯಾಣವನ್ನು ಮುಂದುವರಿಸಲು ಆಸಕ್ತಿ ಇಲ್ಲದವರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿ ಪೂರ್ಣ ಹಣ ಮರುಪಾವತಿ ಪಡೆಯಬಹುದಾಗಿದೆ ಎಂದು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ತಿಳಿಸಿವೆ.





