ಬೆಂಗಳೂರು, ನವೆಂಬರ್ 19: ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಕಾಂಗ್ರೆಸ್ ಭವನದಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಾಂಬ್ ಸಿಡಿಸಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಶಾಶ್ವತವಾಗಿ ಇರಲು ಬಯಸುವುದಿಲ್ಲ. 2020ರಿಂದ ಐದು ವರ್ಷ ಐದು ತಿಂಗಳುಗಳಾಗಿವೆ. ಮುಂದಿನ ಮಾರ್ಚ್‌ಗೆ ಆರು ವರ್ಷ ತುಂಬುತ್ತದೆ. ಆಗ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡ್ತೇನೆ. ಇತರರಿಗೂ ಅವಕಾಶ ಕೊಡಬೇಕು ಎಂದು ಡಿಕೆಶಿ ತಮ್ಮ ಇಚ್ಛೆಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಘೋಷಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯಲು ಸಿದ್ಧರಾಗಿದ್ದರು. ಆದರೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರ ಒತ್ತಡದ ಮೇರೆಗೆ ಮುಂದುವರಿದಿದ್ದೇನೆ ಎಂದು ಡಿಕೆಶಿ ಬಹಿರಂಗಪಡಿಸಿದರು. ಹೈಕಮಾಂಡ್ ಬಯಸಿದಷ್ಟು ಕಾಲ ಇರುತ್ತೇನೆ. ಆದರೆ ಆರು ವರ್ಷ ಸಾಕು. ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎಂದು ಸ್ಪಷ್ಟಪಡಿಸಿದರು.
ಈ ಅನಿರೀಕ್ಷಿತ ಹೇಳಿಕೆಯಿಂದ ಕಾರ್ಯಕ್ರಮದಲ್ಲಿ ಹಾಜರಿದ್ದ ಸಾವಿರಾರು ಕಾರ್ಯಕರ್ತರು ಇಲ್ಲ ಸಾರ್, ಬಿಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಮೈಕ್ ಹಿಡಿದ ಡಿಕೆಶಿ ಕಾರ್ಯಕರ್ತರನ್ನು ಸಮಾಧಾನಪಡಿಸಿ, ನಾನು ಓಡಿಹೋಗುವವನಲ್ಲ. ಸ್ಥಾನ ಇದ್ದರೂ ಇಲ್ಲದಿದ್ದರೂ ನಾನು ಪಕ್ಷದ ಮುಂಚೂಣಿಯಲ್ಲೇ ಇರುತ್ತೇನೆ. ನನ್ನ ಅವಧಿಯಲ್ಲಿ 100 ಹೊಸ ಕಾಂಗ್ರೆಸ್ ಭವನಗಳನ್ನು ತೆರೆದಿದ್ದೇನೆ. ರಾಜ್ಯದಲ್ಲಿ ಪಕ್ಷದ ಬೇರುಗಳನ್ನು ಬಲಿದ್ದೇನೆ. ನನ್ನ ಕೆಲಸ ಶಾಶ್ವತವಾಗಿರುತ್ತದೆ, ನಾನು ಶಾಶ್ವತವಲ್ಲ ಎಂದು ಭಾವುಕವಾಗಿ ಹೇಳಿದರು.
ಬಿಹಾರ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್‌ಗೆ ಆಘಾತ ಉಂಟಾದ ಹಿನ್ನೆಲೆಯಲ್ಲಿ ಡಿಕೆಶಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಬಿಹಾರದಲ್ಲಿ ನಮ್ಮ ಬೇರುಗಳು ಗಟ್ಟಿಯಾಗಿವೆ. ಕರ್ನಾಟಕದಲ್ಲಿ ಖಂಡಿತವಾಗಿಯೂ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಕಾರ್ಯಕ್ರಮ ಮುಗಿದು ಡಿಕೆಶಿ ಕಾಂಗ್ರೆಸ್ ಭವನದಿಂದ ಹೊರಬರುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ಡಿ.ಕೆ. ಶಿವಕುಮಾರ್ – ಮುಂದಿನ ಮುಖ್ಯಮಂತ್ರಿ ! ಎಂಬ ಘೋಷಣೆ ಕೂಗಿ ಅವರನ್ನು ಅಪ್ಪಿಕೊಂಡರು. ಈ
ರಾಜ್ಯ ರಾಜಕೀಯ ವಲಯದಲ್ಲಿ ಡಿಕೆಶಿ ಅವರ ಈ ಹೇಳಿಕೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಇನ್ನಷ್ಟೆ ಉತ್ತರ ಸಿಗಬೇಕಿದೆ. ಆದರೆ ಡಿಕೆಶಿ ತಮ್ಮ ರಾಜಕೀಯ ಭವಿಷ್ಯವನ್ನು ಹೈಕಮಾಂಡ್‌ಗೆ ಬಿಟ್ಟು, ಪಕ್ಷಕ್ಕಾಗಿ ಯಾವುದೇ ಪಾತ್ರಕ್ಕೆ ಸಿದ್ಧರಿದ್ದೇನೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದ್ದಾರೆ.





