ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗುವಂತೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅತೀ ಆಪ್ತ ಬಣದ ಸಚಿವರು ಮತ್ತು ಶಾಸಕರು ದಿಢೀರ್ ದೆಹಲಿ ಪ್ರಯಾಣ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ನಿಖರವಾಗಿ ಎರಡೂವರೆ ವರ್ಷ ಪೂರೈಸಿದ ದಿನವೇ ಈ ಬೆಳವಣಿಗೆ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬುಧವಾರ ರಾತ್ರಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ರಹಸ್ಯ ಸಭೆ ನಡೆದಿದೆ. ಈ ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್. ಚೆಲುವರಾಯಸ್ವಾಮಿ, ಶಾಸಕರಾದ ಮಾಗಡಿ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ್, ಕುಣಿಗಲ್ ರಂಗನಾಥ್, ಆನೇಕಲ್ ಶಿವಣ್ಣ, ನೆಲಮಂಗಲ ಶ್ರೀನಿವಾಸ್, ರವಿಕುಮಾರ ಗಣಿಗ, ಇಕ್ಬಾಲ್ ಹುಸೇನ್ ಸೇರಿದಂತೆ 15ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಶಾಸಕರು ಮತ್ತು ಕೆಲವು ಎಂಎಲ್ಸಿಗಳು ಭಾಗಿಯಾಗಿದ್ದರು. ಸಭೆ ಮುಗಿದ ತಕ್ಷಣ ರಾತ್ರಿಯೇ ವಿಶೇಷ ವಿಮಾನದಲ್ಲಿ ಈ ತಂಡ ದೆಹಲಿಗೆ ತೆರಳಿದೆ.
ದೆಹಲಿಯಲ್ಲಿ ಗುರುವಾರ ಬೆಳಗ್ಗೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಲು ಸಮಯ ನಿಗದಿಪಡಿಸಲಾಗಿದೆ. ನಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುವ ಯೋಜನೆಯಿದೆ. ಎರಡೂವರೆ ವರ್ಷದ ಒಪ್ಪಂದದಂತೆ ಈಗ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕು ಎಂಬುದರ ಬಗ್ಗೆ ಇಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವೇ ಕಾಂಗ್ರೆಸ್‌ಗೆ ಬೆನ್ನೆಲುಬು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿಯೂ ಒಕ್ಕಲಿಗ ಬೆಂಬಲವೇ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿತ್ತು. ಆದರೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ತಾನ ಸಿಗದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಒಕ್ಕಲಿಗ ಮತಗಳನ್ನು ಒಡೆದು ಭಾರೀ ಹಾನಿ ಮಾಡಬಹುದು ಎಂಬ ಆತಂಕವನ್ನು ಈ ಶಾಸಕರು ಹೈಕಮಾಂಡ್ ಮುಂದಿಡಲಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಮೈಸೂರಿನಲ್ಲಿ ಕಾರ್ಯಕ್ರಮದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಢೀರ್ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಡಿ.ಕೆ. ಶಿವಕುಮಾರ್ ಮನೆಯಲ್ಲಿ ನಡೆದ ಸಭೆಯ ಮಾಹಿತಿ ತಿಳಿದ ತಕ್ಷಣ ಸಿಎಂ ಆತಂಕಕ್ಕೊಳಗಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಕೆಲವು ದಿನಗಳಿಂದಲೂ ಡಿ.ಕೆ. ಶಿವಕುಮಾರ್ ಬಣದ ಶಾಸಕರು ಈಗಲೇ ಸಿಎಂ ಬದಲಾವಣೆ ಆಗಬೇಕು ಎಂದು ಒತ್ತಡ ಹೇರುತ್ತಿದ್ದರು. ಇದೀಗ ದೆಹಲಿಗೆ ದಂಡೆತ್ತಿ ಹೋಗಿರುವುದು ರಾಜ್ಯ ರಾಜಾಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ಟ್ರಂಪ್ ಕಾರ್ಡ್ ಅನ್ನು ಈ ಬಾರಿ ದೆಹಲಿ ಹೈಕಮಾಂಡ್ ಮುಂದೆ ಎತ್ತಿ ಹಿಡಿಯುವ ಮೂಲಕ ಅಧಿಕಾರ ಹಸ್ತಾಂತರದ ಕಡೆಗೆ ದೊಡ್ಡ ಒತ್ತಡ ತರುವ ಪ್ರಯತ್ನ ಆರಂಭವಾಗಿದೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಇಡೀ ರಾಜ್ಯದ ಗಮನ ಸೆಳೆದಿದೆ.





