ಬೆಂಗಳೂರು: “ನಾನು ಮತ್ತು ಸಿಎಂ ಬ್ರದರ್ಸ್ ತರಹ ಕೆಲಸ ಮಾಡ್ತಿದ್ದೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ, ಗುಂಪು ಇರೋದೇ ಇಲ್ಲ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.
ವಿಧಾನಸೌಧದ ನಿರ್ಮಾತೃ ಮಹಾನ್ ನಾಯಕ ಕೆಂಗಲ್ ಹನುಮಂತಯ್ಯನವರ 54ನೇ ಪುಣ್ಯತಿಥಿಯ ಅಂಗವಾಗಿ ಇಂದು ಡಿಕೆಶಿ ಅವರು ವಿಧಾನಸೌಧದಲ್ಲಿ ಹನುಮಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಸಮರ್ಪಿಸಿದರು.
ನಂತರ ಮಾತನಾಡಿದ ಅವರು, “ಅದು ನನ್ನ ಮತ್ತು ಸಿಎಂ ಅವರ ನಡುವಿನ ವೈಯಕ್ತಿಕ ವಿಷಯ. ನಾವಿಬ್ಬರೂ ಸಹೋದರರಂತೆ ಇದ್ದೇವೆ. ಬ್ರದರ್ಸ್ ತರ ಕೆಲಸ ಮಾಡ್ತಿದ್ದೀವಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ನೀವು ಮಾಧ್ಯಮದವರೇ ಏನೇನೋ ಬಿತ್ತಿ ತೋರಿಸುತ್ತಿದ್ದೀರಿ, ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಅಂತ. ನಮ್ಮಲ್ಲಿ ಅಂಥ ಯಾವುದೇ ಗುಂಪು ಇಲ್ಲ. ನಾವು ಹುಟ್ಟಿದ್ದು ಒಬ್ಬರೇ, ಸಾಯುವಾಗಲೂ ಒಬ್ಬರೇ. ಹಾಗಿದ್ದಾಗ ಗುಂಪು ಯಾಕೆ ಬೇಕು?” ಎಂದು ಡಿಕೆಶಿ ಪ್ರಶ್ನಿಸಿದರು.
ಅವರು, “ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದರು, ಎಸ್.ಎಂ. ಕೃಷ್ಣ ವಿಕಾಸಸೌಧ ಕಟ್ಟಿದರು, ಬೆಂಗಳೂರನ್ನು ಕೆಂಪೇಗೌಡ ಕಟ್ಟಿದ್ದಾರೆ.. ಯಾರೇ ಅಧಿಕಾರಕ್ಕೆ ಬಂದರೂ ಇಂಥ ಶಾಶ್ವತ ಕೊಡುಗೆಗಳನ್ನು ಬಿಟ್ಟು ಹೋಗಬೇಕು. ನಾವೂ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ನಾನು ಮತ್ತು ಸಿಎಂ ಒಟ್ಟಿಗೆ 140 ಶಾಸಕರನ್ನ ಒಗ್ಗೂಡಿಸಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.” ಎಂದರು.
ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, “ನಿಮ್ಮ ಒತ್ತಡಕ್ಕೆ ಬ್ರೇಕ್‌ಫಾಸ್ಟ್ ಎಲ್ಲಾ? ನಮಗೆ ಅಂಥ ಯಾವುದೇ ಅಗತ್ಯ ಇಲ್ಲ. ನಾವು ಎಲ್ಲವನ್ನೂ ಒಟ್ಟಾಗೇ ಮಾಡುತ್ತಿದ್ದೇವೆ” ಎಂದು ನಗುಮೊಗದಲ್ಲಿ ಹೇಳಿದರು.
ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, “ಇನ್ನೂ ಡಿಕೆಶಿ ಬ್ರೇಕ್‌ಫಾಸ್ಟ್‌ಗೆ ಕರೆದಿಲ್ಲ. ಕರೆದರೆ ಕರೆಯುತ್ತಾರೆ, ಕರೆದ್ರೆ ನಾನು ಖಂಡಿತ ಹೋಗುತ್ತೇನೆ” ಎಂದು ಸಿದ್ದು ಸರಳವಾಗಿ ಹೇಳಿದರು.





