ಧಾರವಾಡ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ಸಾವನ್ನಪ್ಪಿರುವ ಘಟನೆ ಧಾರವಾಡದ ಚಿಕ್ಕಮಲ್ಲಿಗವಾಡ ಗ್ರಾಮದ ಬಳಿ ನಡೆದಿದೆ. ಬಿಹಾರ ಮೂಲದ 23 ವರ್ಷದ ಎಂಟೆಕ್ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಅಸ್ತಿತ್ವ ಗುಪ್ತಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಐಐಟಿ ಆಡಳಿತ ಮಂಡಳಿಯು ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಕಳೆದ ಎರಡು ದಿನಗಳ ಹಿಂದೆ ಐಐಟಿ ಕ್ಯಾಂಪಸ್‌ನಲ್ಲಿ ನಡೆದ ಎನ್‌ಸಿಸಿ (ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್) ಆಯ್ಕೆ ಕಾರ್ಯಕ್ರಮದ ವೇಳೆ ಈ ದುರಂತ ಸಂಭವಿಸಿದೆ. ಅಸ್ತಿತ್ವ ಗುಪ್ತಾ ಅವರು ಎನ್‌ಸಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಓಡುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ತಕ್ಷಣವೇ ಐಐಟಿ ಕ್ಯಾಂಪಸ್‌ನ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ, ಅವರ ಆರೋಗ್ಯ ಸ್ಥಿತಿಯನ್ನು ಗಂಭೀರವಾಗಿ ಗಮನಿಸಿದ ಐಐಟಿ ಆಡಳಿತ ಮಂಡಳಿಯು ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ರವಾನಿಸಿತ್ತು.
ಆಸ್ಪತ್ರೆಯಲ್ಲಿ ಅಸ್ತಿತ್ವ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆಯನ್ನು ಮುಂದುವರೆಸಲಾಯಿತು. ಆರಂಭದಲ್ಲಿ ಅವರ ಆರೋಗ್ಯ ಸ್ಥಿರವಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ಆದರೆ, ದುರದೃಷ್ಟವಶಾತ್, ರಾತ್ರಿಯ ವೇಳೆ ಅವರಿಗೆ ಮತ್ತೊಮ್ಮೆ ಹೃದಯಾಘಾತ ಸಂಭವಿಸಿದ್ದು, ಇದರಿಂದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಈ ಘಟನೆಯ ನಂತರ ಐಐಟಿ ಆಡಳಿತ ಮಂಡಳಿಯು ಅಸ್ತಿತ್ವ ಗುಪ್ತಾ ಅವರ ತಂದೆ-ತಾಯಿಗೆ ಈ ಸುದ್ದಿಯನ್ನು ತಿಳಿಸಿತ್ತು. ಅವರ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಅಸ್ತಿತ್ವ ಅವರ ಕುಟುಂಬವು ಬಿಹಾರದಿಂದ ಧಾರವಾಡಕ್ಕೆ ಆಗಮಿಸಿದ್ದು, ಶವವನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಾರಣಾಸಿಗೆ ತೆಗೆದುಕೊಂಡು ಹೋಗಲಾಯಿತು. ಅವರ ಅಂತಿಮ ಸಂಸ್ಕಾರವನ್ನು ವಾರಣಾಸಿಯಲ್ಲಿ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.