ಮಂಗಳೂರು: ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ಯೂಟ್ಯೂಬರ್ಸ್ ಮತ್ತು ಸ್ಥಳೀಯರ ನಡುವೆ ಗಲಾಟೆ ಮತ್ತು ಹಲ್ಲೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಇನ್ನೂ 27 ಜನರನ್ನು ಹುಡುಕುತ್ತಿದ್ದಾರೆ. ಈ ಘರ್ಷಣೆಯಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ.
ಬಂಧಿತರ ಹೆಸರುಗಳು ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್ ಮತ್ತು ಚೇತನ್ ಎಂದು ಗುರುತಿಸಲಾಗಿದೆ. ಇವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಘಟನೆಯ ಹಿನ್ನೆಲೆ
ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಅಥವಾ ನಿಗೂಢ ಆಸ್ಥಿಪಂಜರಗಳ ರಹಸ್ಯದ ಬಗ್ಗೆ ಅನಾಮಿಕ ದೂರುದಾರರೊಬ್ಬರು ಮಾಹಿತಿ ನೀಡಿದ್ದರು. ಆಗಸ್ಟ್ 6 ರಂದು ಎಸ್‌ಐಟಿ ಅಧಿಕಾರಿಗಳು ಆ ಸ್ಥಳದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕುಡ್ಲ ರ್ಯಾಂಪೇಜ್ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ಸಂತೋಷ್ ಮತ್ತು ವಿಜಯ್ ಎಂಬ ಯೂಟ್ಯೂಬರ್‌ಗಳು ವರದಿ ಮಾಡುತ್ತಿದ್ದರು. ಸ್ಥಳೀಯರು ಇವರನ್ನು ಪ್ರಶ್ನಿಸಿ, ಧರ್ಮಸ್ಥಳದ ವಿರುದ್ಧ ಸುಳ್ಳುಸುದ್ದಿ ಹಬ್ಬಿಸುತ್ತಿರುವುದಾಗಿ ಆರೋಪಿಸಿದರು. ಇದು ಮೊದಲು ವಾಗ್ವಾದಕ್ಕೆ ಕಾರಣವಾಗಿ, ನಂತರ ತಳ್ಳಾಟ, ನೂಕಾಟಕ್ಕೆ ತಿರುಗಿತ್ತು. ಸ್ಥಳೀಯ ಭಕ್ತರು ಮತ್ತು ಯೂಟ್ಯೂಬರ್ ಬೆಂಬಲಿಗರ ನಡುವೆ ಘರ್ಷಣೆ ತೀವ್ರಗೊಂಡು, ವಾಹನಗಳಿಗೆ ಹಾನಿ ಮಾಡಲಾಯಿತು, ಕ್ಯಾಮೆರಾ ಮತ್ತು ಮೆಮರಿ ಕಾರ್ಡ್‌ಗಳನ್ನು ಕಸಿದುಕೊಳ್ಳಲಾಯಿತು.
ಪೊಲೀಸರು ಸ್ಥಳಕ್ಕೆ ಧಾವಿಸಿ ಲಘು ಲಾಠಿ ಚಾರ್ಜ್ ಮಾಡಿ ಗುಂಪುಗಳನ್ನು ಚದುರಿಸಿದರು. ಗಾಯಗೊಂಡ ನಾಲ್ವರು ಯೂಟ್ಯೂಬರ್‌ಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಗಂಭೀರ ಗಾಯಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ನಂತರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ, ಒಟ್ಟು 7 ಎಫ್‌ಐಆರ್‌ಗಳನ್ನು ಫೈಲ್ ಮಾಡಿದ್ದಾರೆ. ಇದರಲ್ಲಿ ಹಲ್ಲೆ, ಅಕ್ರಮ ಕೂಟ ಸೇರಿದ್ದು, ಜೀವ ಬೆದರಿಕೆ, ವಾಹನ ಹಾನಿ ಮತ್ತು ಗಲಭೆ ಸೃಷ್ಟಿ ಸೇರಿದಂತೆ ವಿವಿಧ ಕಲಂಗಳ ಅಡಿ ದೂರುಗಳಿವೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 4 ಮತ್ತು ಬೆಳ್ತಂಗಡಿ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ.
ಪ್ರಕರಣದಲ್ಲಿ ಮೊದಲು ಬಂಧಿತನಾದವ ಸೋಮನಾಥ ಸಪಲ್ಯ, ಕನ್ಯಾಡಿಯ ಜೀಪ್ ಚಾಲಕ. ಅವನನ್ನು ಕೊಕ್ಕಡದಲ್ಲಿ ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಂತರ ಆರು ಜನರ ಬಂಧನವು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪೊಲೀಸರು ವೀಡಿಯೋ ಸಾಕ್ಷ್ಯಗಳು ಮತ್ತು ಸಿಸಿಟಿವಿ ಫೂಟೇಜ್‌ಗಳನ್ನು ಬಳಸಿ ತನಿಖೆ ನಡೆಸುತ್ತಿದ್ದಾರೆ. ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ತೀವ್ರಗೊಂಡಿದೆ.