ಮಂಗಳೂರು: ಕರ್ನಾಟಕದಾದ್ಯಂತ ಆತಂಕ ಮತ್ತು ಆಘಾತ ಮೂಡಿಸಿದ್ದ ಧರ್ಮಸ್ಥಳದ ಭಯಾನಕ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಆರೋಪಿ ಚಿನ್ನಯ್ಯಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಆದೇಶದೊಂದಿಗೆ ನಾಳೆಯೇ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಚಿನ್ನಯ್ಯ ಬಿಡುಗಡೆಯಾಗುವ ಸಾಧ್ಯತೆ ದೆ.
ಧರ್ಮಸ್ಥಳದ ಕಾಡುಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಮೃತದೇಹಗಳನ್ನು ಗುಪ್ತವಾಗಿ ಹೂತಿಟ್ಟಿದ್ದಾರೆಂಬ ಆರೋಪ ಎದುರಿಸುತ್ತಿದ್ದ ಚಿನ್ನಯ್ಯ ಅವರನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು.
ಜಾಮೀನು ಅರ್ಜಿ ವಿಚಾರಣೆಯಲ್ಲಿ ನ್ಯಾಯಾಲಯ ಹಲವು ಅಂಶಗಳನ್ನು ಪರಿಗಣಿಸಿದೆ. ಚಿನ್ನಯ್ಯ ಅವರ ವಯಸ್ಸು, ಆರೋಗ್ಯ ಸ್ಥಿತಿ, ಜೈಲಿನಲ್ಲಿದ್ದ ಅವಧಿ ಮತ್ತು ತನಿಖೆಯಲ್ಲಿ ಸಹಕಾರ ನೀಡುತ್ತಿರುವುದು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೋರ್ಟ್ ಜಾಮೀನು ನೀಡಿದೆ. ಆದರೆ ಇದು ಸಾಧಾರಣ ಜಾಮೀನಲ್ಲ. ಒಟ್ಟು 12 ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಲಾಗಿದೆ.
ಮುಖ್ಯ ಷರತ್ತುಗಳು
- 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್
- ಇಬ್ಬರು ಜಾಮೀನುದಾರರು (ಪ್ರತಿಯೊಬ್ಬರು 1 ಲಕ್ಷ ರೂ. ಖಾತರಿ)
- ಪ್ರತಿ ಸೋಮವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕು
- ಧರ್ಮಸ್ಥಳ ಪೊಲೀಸ್ ವ್ಯಾಪ್ತಿಯನ್ನು ಬಿಟ್ಟು ಹೋಗಬಾರದು (ಕೋರ್ಟ್ ಅನುಮತಿ ಇಲ್ಲದೆ)
- ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು
- ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯನ್ನು ಸಂಪರ್ಕಿಸಬಾರದು
ಈ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗಲಿದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಧರ್ಮಸ್ಥಳ ಬುರುಡೆ ಕೇಸ್: ನಾಳೆ ಮಾಸ್ಕ್ ಮ್ಯಾನ್ ಚಿನ್ನಯ್ಯನ ಕಸ್ಟಡಿ ಅಂತ್ಯ
ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ವಿಶೇಷ ತನಿಖಾ ತಂಡದ (SIT) ತನಿಖೆ ತೀವ್ರಗೊಂಡಿದೆ. ಕೇಸ್‌ನ ಪ್ರಮುಖ ಆರೋಪಿಯಾದ ಮಾಸ್ಕ್ ಮ್ಯಾನ್ ಚಿನ್ನಯ್ಯನ ಕಸ್ಟಡಿ ಅವಧಿ ನಾಳೆ ಅಂತ್ಯಗೊಳ್ಳುತ್ತಿದ್ದು, SIT ತನ್ನ ತನಿಖೆಯನ್ನು ತ್ವರಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಸ್ಥಳ ಮಹಜರು ಪ್ರಕ್ರಿಯೆಯನ್ನು ಮುಗಿಸಲಾಗಿದ್ದು, ತನಿಖೆಗೆ ಸಂಬಂಧಿಸಿದ ಕೆಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ, ಮಟ್ಟಣ್ಣನವರ್ ಮನೆಯಲ್ಲೂ ಮಹಜರು ನಡೆಸಲಾಗಿದೆ. SIT ತಂಡವು ಇಂದೇ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ.
ಬೆಂಗಳೂರಿನ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ SIT ತಂಡವು ತೀವ್ರ ಶೋಧ ಕಾರ್ಯ ನಡೆಸಿದೆ. ಈ ಅಪಾರ್ಟ್‌ಮೆಂಟ್‌ನ ಲೆಡ್ಜರ್ ಬುಕ್‌ಗಳನ್ನು ಪರಿಶೀಲಿಸಲಾಗಿದ್ದು, ಯಾರ ಹೆಸರಿನಲ್ಲಿ ಕೊಠಡಿಗಳನ್ನು ಬುಕ್ ಮಾಡಲಾಗಿತ್ತು, ಯಾವಾಗ ಬುಕ್ ಆಗಿತ್ತು, ಎಷ್ಟು ಜನ ಕೊಠಡಿಗೆ ಭೇಟಿ ನೀಡಿದ್ದರು, ಮತ್ತು ಎಷ್ಟು ಬಾರಿ ಬುಕ್ ಆಗಿತ್ತು ಎಂಬ ವಿವರಗಳನ್ನು ದಾಖಲಿಸಲಾಗಿದೆ. ಇದರ ಜೊತೆಗೆ, ಸರ್ವಿಸ್ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಡಿವಿಆರ್‌ನ್ನು ವಶಪಡಿಸಿಕೊಂಡು ವಿವರವಾದ ತಪಾಸಣೆ ನಡೆಸಲಾಗುತ್ತಿದೆ. ಈ ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು SIT ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಈ ಕೇಸ್‌ಗೆ ಸಂಬಂಧಿಸಿದಂತೆ ಮಂಡ್ಯ ಮತ್ತು ಚೆನ್ನೈನಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಇನ್ನೂ ಬಾಕಿಯಿದ್ದು, ಇದನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ಯೋಜನೆಯನ್ನು SIT ರೂಪಿಸಿದೆ. ಈ ಎರಡೂ ಸ್ಥಳಗಳಲ್ಲಿ ಪ್ರಮುಖ ಸಾಕ್ಷ್ಯಗಳು ದೊರೆಯುವ ಸಾಧ್ಯತೆ ಇದ್ದು, ತನಿಖೆಯನ್ನು ಮತ್ತಷ್ಟು ಬಲಪಡಿಸಲು ಈ ಕಾರ್ಯಾಚರಣೆ ಮಹತ್ವದ್ದಾಗಿದೆ.
ನಾಳೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು
ನಾಳೆ ಚಿನ್ನಯ್ಯನ ಕಸ್ಟಡಿ ಅವಧಿ ಮುಗಿಯುವ ಹಿನ್ನೆಲೆಯಲ್ಲಿ SIT ತಂಡವು ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ತನಿಖೆಯನ್ನು ಮುಂದುವರಿಸಲು ಚಿನ್ನಯ್ಯನ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ SIT ಕೋರಬಹುದು ಎಂದು ಮೂಲಗಳು ತಿಳಿಸಿವೆ.





