ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ಶಾಸಕ ಉದಯ್ ಜೈನ್, ಧೀರಜ್ ಕೆಲ್ಲಾ ಮತ್ತು ಮಲ್ಲಿಕ್ ಜೈನ್‌ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಲಾವ್ ನೀಡಿದೆ. ಈ ಮಧ್ಯೆ, ಉದಯ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿ, “ನಾನು ಯಾವುದೇ ತನಿಖೆಗೆ ಸಿದ್ಧನಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಬೆಳವಣಿಗೆಯು ಧರ್ಮಸ್ಥಳದ ಬರುಡೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಜೊತೆಗೆ ಸೌಜನ್ಯ ಕೇಸ್‌ಗೂ ಹೊಸ ಟ್ವಿಸ್ಟ್ ಸಿಕ್ಕಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಘಟನೆಯಾಗಿದೆ. ಈ ಪ್ರಕರಣದಲ್ಲಿ ಸೌಜನ್ಯ ಅವರ ಕುಟುಂಬವು ಶಾಸಕ ಉದಯ್ ಜೈನ್ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿತ್ತು. ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ಕುಟುಂಬವು ಸತತ ಹೋರಾಟ ನಡೆಸಿತ್ತು. ಈಗ ಎಸ್‌ಐಟಿ ತನಿಖೆಯ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದ ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಉದಯ್ ಜೈನ್‌ಗೆ ವಿಚಾರಣೆಗೆ ಕರೆಯಲಾಗಿದೆ. ಜೈನ್‌ರವರು ತಾವು ಯಾವುದೇ ತನಿಖೆಗೆ ಸಹಕರಿಸಲು ಸಿದ್ಧರಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ವಿಚಾರಣೆಯು ಸೌಜನ್ಯ ಕೇಸ್‌ನ ತನಿಖೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆದರೆ, ಕೆಲವರು ಈ ತನಿಖೆಯನ್ನು ಬರುಡೆ ಪ್ರಕರಣದಿಂದ ಗಮನ ವಿಚಲನ ಮಾಡುವ ತಂತ್ರವೆಂದು ಆರೋಪಿಸಿದ್ದಾರೆ. ಬರುಡೆ ಪ್ರಕರಣದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಆರೋಪವಿದ್ದು, ಈಗ ಸೌಜನ್ಯ ಕೇಸ್‌ನ ತನಿಖೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಸ್‌ಐಟಿ ಎರಡೂ ಪ್ರಕರಣಗಳನ್ನು ತನಿಖೆ ಮಾಡುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.