ಮಂಗಳೂರು, ಅಕ್ಟೋಬರ್ 6, 2025: ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ ಸುಜಾತಾ ಭಟ್ ಮತ್ತು ಅನನ್ಯ ಭಟ್ ಕಟ್ಟುಕತೆಗೆ ಸಂಬಂಧಿಸಿದ ತನಿಖೆಯಲ್ಲಿ ಹೊಸ ತಿರುವು ಕಾಣಿಸಿಕೊಂಡಿದೆ. ದಕ್ಷಿಣ ಭಾರತದ ಖ್ಯಾತ ನಟ, ಖಳನಾಯಕ ಪ್ರಕಾಶ್ ರೈ ಸಹೋದರನಿಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಶೀಘ್ರದಲ್ಲೇ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದ ತನಿಖೆಯ ವೇಳೆ ಎಸ್‌ಐಟಿಗೆ ಆ ನಟನ ಹೆಸರು ದೊರೆತಿದ್ದು, ಚೆನ್ನೈನಲ್ಲಿ ಆತನ ವಿಳಾಸವನ್ನು ಪತ್ತೆಹಚ್ಚುವ ಕಾರ್ಯ ತೀವ್ರಗೊಂಡಿದೆ.
ಕೊಡಗು ಮೂಲದ ವಾಸಂತಿ ಪ್ರಕರಣದ ಲಿಂಕ್
ಕೊಡಗು ಮೂಲದ ವಾಸಂತಿ, ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಕೆಯ ಗಂಡ ಮತ್ತು ಈ ಖ್ಯಾತ ನಟನ ಸಹೋದರ ಸ್ನೇಹಿತರಾಗಿದ್ದರು. ವಾಸಂತಿಯವರ ಮನೆಗೆ ಆಗಾಗ ಈ ನಟನ ಸಹೋದರ ಭೇಟಿ ನೀಡುತ್ತಿದ್ದ. ಆಕೆಯ ದಾಂಪತ್ಯ ಜೀವನದ ರಹಸ್ಯಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಆತನಿಗೆ ಮಾಹಿತಿ ಇತ್ತು ಎಂದು ಎಸ್‌ಐಟಿಗೆ ದೊರೆತ ಮಾಹಿತಿಯಿಂದ ತಿಳಿದುಬಂದಿದೆ. ಸುಜಾತಾ ಭಟ್ ಕಟ್ಟುಕತೆ ಮತ್ತು ವಾಸಂತಿ ಪ್ರಕರಣದ ಜಾಡು ಹಿಡಿದ ಎಸ್‌ಐಟಿಗೆ ಈ ನಟನ ಸಹೋದರನ ಒಡನಾಟದ ಬಗ್ಗೆ ಸುಳಿವು ಸಿಕ್ಕಿದೆ.
ಚೆನ್ನೈ ವಿಳಾಸದ ಹುಡುಕಾಟ
ಸದ್ಯ ಚೆನ್ನೈ ಬೀಚ್ ಸುತ್ತಮುತ್ತ ವಾಸವಾಗಿರುವ ಈ ನಟನ ಸಹೋದರ ಕಾಲಿವುಡ್‌ನಲ್ಲಿ ನಟನಾಗಿದ್ದಾನೆ. ಎಸ್‌ಐಟಿ ಆತನ ವಿಳಾಸವನ್ನು ದೃಢಪಡಿಸಲು ಪ್ರಯತ್ನಿಸುತ್ತಿದ್ದು, ಈ ಕಾರಣದಿಂದಾಗಿ ನೋಟಿಸ್ ಜಾರಿಗೆ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ನಟನ ಸಹೋದರನಿಗೆ ನೋಟಿಸ್ ಜಾರಿಯಾದರೆ, ಈ ಪ್ರಕರಣದಲ್ಲಿ ದೊಡ್ಡ ತಿರುವು ಸಿಗುವ ಸಾಧ್ಯತೆ ಇದೆ.
ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನು ತೀವ್ರಗೊಳಿಸಿದೆ. ಆ್ಯಂಬುಲೆನ್ಸ್ ಚಾಲಕರಾದ ಜಲೀಲ್ ಬಾಬಾ ಮತ್ತು ಹಮೀದ್ ಅವರನ್ನು ಮತ್ತೆ ವಿಚಾರಣೆಗೆ ಕರೆಸಲಾಗಿದೆ. ಶನಿವಾರ ನಡೆದ ವಿಚಾರಣೆಯಲ್ಲಿ, ಧರ್ಮಸ್ಥಳದ ಸುತ್ತಮುತ್ತ ಅನಾಮಿಕ ಶವಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಇಬ್ಬರು ಚಾಲಕರಿಂದ ದೊರೆತ ಮಾಹಿತಿಯು ತನಿಖೆಗೆ ಪ್ರಮುಖ ಸುಳಿವುಗಳನ್ನು ಒದಗಿಸುವ ಸಾಧ್ಯತೆ ಇದೆ.
ಸುಜಾತಾ ಭಟ್ ಹಿನ್ನೆಲೆ
2003ರಲ್ಲಿ ಸುಜಾತಾ ಭಟ್ ತಮ್ಮ ಮಗಳಾದ ಅನನ್ಯಾ ಭಟ್ ಧರ್ಮಸ್ಥಳದಿಂದ ಕಾಣೆಯಾಗಿದ್ದಾಳೆ ಎಂದು ದೂರಿದ್ದರು. ಆಕೆಯ ಅಸ್ಥಿಪಂಜರವನ್ನಾದರೂ ಹುಡುಕಿಕೊಡಿ ಎಂದು ಎಸ್‌ಐಟಿಗೆ ಮನವಿ ಸಲ್ಲಿಸಿದ್ದರು. ಆದರೆ, ಬಳಿಕ ಸುಜಾತಾ ಭಟ್ ತಾವು ಆಸ್ತಿ ವಿವಾದಕ್ಕಾಗಿ ಈ ಕತೆಯನ್ನು ಕಟ್ಟಿದ್ದಾಗಿ ಒಪ್ಪಿಕೊಂಡು ವೀಡಿಯೊ ಬಿಡುಗಡೆ ಮಾಡಿದ್ದರು.
ಧರ್ಮಸ್ಥಳ ದೇವಾಲಯಕ್ಕೆ ಸಂಬಂಧಿಸಿದ ಆಸ್ತಿ ವಿಷಯದಲ್ಲಿ ಹೋರಾಟಗಾರರ ಒತ್ತಡಕ್ಕೆ ಮಣಿದು ಈ ಆರೋಪ ಮಾಡಿದ್ದಾಗಿ ತಿಳಿಸಿದ್ದರು. ಆದರೆ, ನಂತರ ಯೂ-ಟರ್ನ್ ತೆಗೆದುಕೊಂಡು, ಯೂಟ್ಯೂಬರ್ ಒಬ್ಬ ತನಗೆ ಮಗಳೇ ಇರಲಿಲ್ಲ ಎಂದು ಹೇಳುವಂತೆ ಒತ್ತಾಯಿಸಿದ್ದಾನೆ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಎಸ್‌ಐಟಿ ವಿಚಾರಣೆಯಲ್ಲಿ ಆಕೆಯ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿದ್ದವು. ಕೊನೆಗೆ, ಸುಜಾತಾ ಭಟ್ ತಮ್ಮ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಈಗ ಈ ಪ್ರಕರಣದಲ್ಲಿ ಖ್ಯಾತ ನಟನ ಸಹೋದರನ ಹೆಸರು ಕೇಳಿಬಂದಿರುವುದು ತನಿಖೆಗೆ ಹೊಸ ಆಯಾಮವನ್ನು ನೀಡಿದೆ.