ಮಂಗಳೂರು, ಸೆಪ್ಟೆಂಬರ್ 6, 2025: ಧರ್ಮಸ್ಥಳದ ತಲೆಬುರುಡೆ ಪ್ರಕರಣ (Dharmasthala Case) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಪ್ರಕರಣದಲ್ಲಿ ಈಗ ಕೇರಳದ ಕಮ್ಯೂನಿಸ್ಟ್ ಪಕ್ಷದ (CPI) ರಾಜ್ಯಸಭಾ ಸಂಸದ ಸಂತೋಷ್ ಕುಮಾರ್‌ಗೆ ಸಂಬಂಧ ಕಲ್ಪಿಸಲಾಗಿದ್ದು, ತನಿಖೆಯಲ್ಲಿ ಹೊಸ ತಿರುವು ದೊರೆತಿದೆ.
ಮಾಸ್ಕ್‌ಮ್ಯಾನ್ ಎಂದೇ ಖ್ಯಾತನಾದ ಚಿನ್ನಯ್ಯ ಎಂಬಾತ ತಲೆಬುರುಡೆಯೊಂದಿಗೆ ಕೇರಳದ ಸಂಸದನ ಬಳಿ ತೆರಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದ ಎಂಬ ಸ್ಫೋಟಕ ಮಾಹಿತಿ ಎಸ್‌ಐಟಿ ತನಿಖೆಯಿಂದ ಬಹಿರಂಗವಾಗಿದೆ.
ಎಸ್‌ಐಟಿ ಕಸ್ಟಡಿಯಲ್ಲಿರುವ ಚಿನ್ನಯ್ಯ, ತಾನು ತಲೆಬುರುಡೆಯನ್ನು ಧರ್ಮಸ್ಥಳದಿಂದ ತಂದಿಲ್ಲ, ಜಯಂತ್ ಎಂಬಾತನಿಂದ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಜಯಂತ್ ಮಾತ್ರ ತಲೆಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾನೆ. ಗಿರೀಶ್ ಮಟ್ಟಣ್ಣನವರ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ (ನಂಬರ್ 39/2025) ಭಾರತೀಯ ನ್ಯಾಯ ಸಂಹಿತೆ (BNS) 211(A), 336, 230, 231, 229, 227, 228, 240, 236, 233, ಮತ್ತು 248 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸೆಕ್ಷನ್‌ಗಳು ಸುಳ್ಳು ಸಾಕ್ಷ್ಯ, ನಕಲಿ ದಾಖಲೆ ಸೃಷ್ಟಿ, ಮಾಹಿತಿ ಮರೆಮಾಚುವಿಕೆ, ಮತ್ತು ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವಿಕೆಯಂತಹ ಗಂಭೀರ ಆರೋಪಗಳನ್ನು ಒಳಗೊಂಡಿವೆ.
ಇದೇ ವೇಳೆ, ಧರ್ಮಸ್ಥಳದಲ್ಲಿ ಅನ್ಯಾಯ, ಅತ್ಯಾಚಾರ, ಮತ್ತು ಅಕ್ರಮಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರೋಪಿಸಿದ್ದ ಅಭಿಷೇಕ್ ಎಂಬಾತನೂ ಎಸ್‌ಐಟಿ ವಿಚಾರಣೆಯಲ್ಲಿ ಕಣ್ಣೀರಿಟ್ಟಿದ್ದಾನೆ. ಆಗಸ್ಟ್ 3 ರಂದು ತಡರಾತ್ರಿ 2:30 ರವರೆಗೆ ಎಸ್‌ಐಟಿ ಅಧಿಕಾರಿಗಳು ಆತನನ್ನು ವಿಚಾರಣೆಗೊಳಪಡಿಸಿದ್ದರು.





