ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಮ್ಮೆ ಫುಡ್ ಡೆಲಿವರಿ ಸಿಬ್ಬಂದಿ ಮೇಲೆ ಹಲ್ಲೆಯ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯಿಂದ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ ವ್ಯಾಪ್ತಿ ಬಳಿ ನಡೆದಿದೆ. ಈ ದಾಳಿಯಲ್ಲಿ ವೆಂಕಟೇಶ್ ಎಂಬ ಡೆಲಿವರಿ ಬಾಯ್ ತೀವ್ರ ಗಾಯಗೊಂಡಿದ್ದಾರೆ.
ವೆಂಕಟೇಶ್, ಹೆಸರಘಟ್ಟ ರಸ್ತೆಯ ಬಾಗಲಗುಂಟೆಯ ಪಿಜ್ಜಾ ಹಟ್‌ನಿಂದ ಆರ್ಡರ್ ತೆಗೆದುಕೊಂಡು ಗ್ರಾಹಕರ ಕಡೆಗೆ ಹೋಗುತ್ತಿದ್ದರು. ಲೊಕೇಶನ್ ತಲುಪಿದ ಕೂಡಲೇ ಗ್ರಾಹಕರನ್ನು ಸಂಪರ್ಕಿಸಲು ಫೋನ್ ಕರೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸಾಕಷ್ಟು ಜಾಗವಿದ್ದರೂ “ರಸ್ತೆ ಬಳಿ ನಿಂತು ಫೋನ್‌ನಲ್ಲಿ ಮಾತನಾಡುತ್ತಿದ್ದೀಯಾ” ಎಂದು ಆರೋಪಿಸಿ, ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಕ್ಯಾತೆ ತಗೆದು ಹಲ್ಲೆ ನಡೆಸಿದ್ದಾನೆ. ಆರೋಪಿ ಹಲ್ಲೆ ನಡೆಸಿದ ಪರಿಣಾಮ ವೆಂಕಟೇಶ್ ಅವರ ಬಾಯಿ, ಮುಖ ಮತ್ತು ತಲೆಯ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಗಾಯಗೊಂಡ ವೆಂಕಟೇಶ್ ನಂತರ ಸ್ಥಳೀಯರ ಸಹಾಯದಿಂದ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಅವರು ನೇರವಾಗಿ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಘಟನೆ ನಡೆದ ತಕ್ಷಣ, ಆರೋಪಿ ಸ್ಥಳದಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಈ ಮಾಹಿತಿ ಆಧರಿಸಿ, ಪೀಣ್ಯ ಪೊಲೀಸರು ಆರೋಪಿ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳು, ಸ್ಥಳೀಯರ ಹೇಳಿಕೆ ಮತ್ತು ಮಾಹಿತಿ ಸಂಗ್ರಹಣೆಯ ಮೂಲಕ ಹುಡುಕಾಟವನ್ನು ಮುಂದುವರಿಸಿದ್ದಾರೆ.
ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ





