ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಊರಿಗೆ ತೆರಳಲು ಯೋಜನೆ ಮಾಡುತ್ತಿರುವವರಿಗೆ ಖಾಸಗಿ ಬಸ್ ದರ ಏರಿಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸಾಲು ಸಾಲು ರಜೆ ದಿನಗಳಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ತಮ್ಮ ಊರುಗಳಿಗೆ ಪ್ರಯಾಣಿಸುವ ತಯಾರಿಯಲ್ಲಿದ್ದಾರೆ. ಆದರೆ, ಖಾಸಗಿ ಬಸ್ ಮಾಲೀಕರಿಂದ ಟಿಕೆಟ್ ದರವನ್ನು ಒನ್‌ವೇಯಿಂದ ತ್ರಿಬಲ್‌ಗೆ ಏರಿಕೆ ಮಾಡಿರುವುದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ಈ ದರ ಏರಿಕೆಯಿಂದಾಗಿ ಸಾಮಾನ್ಯ ಜನರ ಹಬ್ಬದ ಸಂತೋಷಕ್ಕೆ ಕೊಡಲಿಯಂತಾಗಿದೆ.
1.ಖಾಸಗಿ ಬಸ್ ದರ ಏರಿಕೆ
ಗ್ಯಾರಂಟಿ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಖಾಸಗಿ ಬಸ್ ಟಿಕೆಟ್ ದರದ ಅಸಲಿಯತ್ತು ಬಯಲಾಗಿದೆ. ಸಾಮಾನ್ಯವಾಗಿ 500-700 ರೂಪಾಯಿಗಳಿರುವ ಬೆಂಗಳೂರಿನಿಂದ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಮೈಸೂರು ಮತ್ತು ಇತರ ಪ್ರಮುಖ ಊರುಗಳಿಗೆ ಟಿಕೆಟ್ ದರವು ಈಗ 1500-2500 ರೂಪಾಯಿಗಳಿಗೆ ಏರಿಕೆಯಾಗಿದೆ. ಕೆಲವು ಐಷಾರಾಮಿ AC ಬಸ್‌ಗಳಲ್ಲಿ ಇದು 3000 ರೂಪಾಯಿಗಳಿಗೂ ಮೀರಿದೆ. ದೀಪಾವಳಿಯ ರಜೆಯ ಭರಾಟೆಯಲ್ಲಿ ಈ ದರ ಏರಿಕೆಯನ್ನು ಖಾಸಗಿ ಬಸ್ ಮಾಲೀಕರು ಲಾಭದಾಯಕ ಅವಕಾಶವಾಗಿ ಬಳಸಿಕೊಂಡಿದ್ದಾರೆ.
2.ಸಾರಿಗೆ ಇಲಾಖೆ ನಿಯಮಕ್ಕೆ ಗಾಳಿಗೆ ತೂರಿಕೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತು ಸಾರಿಗೆ ಇಲಾಖೆಯು ಈ ಹಿಂದೆ ದರ ಏರಿಕೆ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸೂಚನೆ ನೀಡಿತ್ತು. ಆದರೆ, ಈ ನಿಯಮವನ್ನು ಗಾಳಿಗೆ ತೂರಿ, ಖಾಸಗಿ ಬಸ್ ಆಪರೇಟರ್‌ಗಳು ಇಚ್ಛೆಯಂತೆ ದರ ಹೆಚ್ಚಿಸಿದ್ದಾರೆ. KSRTC ಬಸ್‌ಗಳಿಗೆ ಡಿಮ್ಯಾಂಡ್ ಹೆಚ್ಚಿರುವುದರಿಂದ ಟಿಕೆಟ್‌ಗಳು ತಕ್ಷಣವೇ ಬುಕ್ ಆಗುತ್ತಿವೆ, ಇದರಿಂದ ಜನರು ಖಾಸಗಿ ಬಸ್‌ಗಳನ್ನೇ ಆಶ್ರಯಿಸಬೇಕಾದ ಸ್ಥಿತಿಗೆ ತಲುಪಿದ್ದಾರೆ.
3.ಬಸ್ ಟೆಕೆಟ್ ದರ ಏರಿಕೆಯ ವಿವರ
- ಬೆಂಗಳೂರು – ಮಡಿಕೇರಿ
ಇಂದಿನ ದರ : ₹500 – ₹600
ಅ.17 ರ ಟಿಕೆಟ್ ದರ : ₹2299 – ₹5000 - ಬೆಂಗಳೂರು – ಉಡುಪಿ
ಇಂದಿನ ದರ : ₹600 – ₹950
ಅ. 17 ರ ಟಿಕೆಟ್ ದರ : ₹2500 – ₹3700 - ಬೆಂಗಳೂರು – ಧಾರವಾಡ
ಇಂದಿನ ದರ : ₹800 – ₹1200
ಅ. 17 ರ ಟಿಕೆಟ್ ದರ : ₹1700 – ₹3000 - ಬೆಂಗಳೂರು – ಬೆಳಗಾವಿ
ಇಂದಿನ ದರ : ₹800 – ₹1000
ಅ. 17 ರ ಟಿಕೆಟ್ ದರ : ₹2000 – ₹3999 - ಬೆಂಗಳೂರು – ದಾವಣಗೆರೆ
ಇಂದಿನ ದರ : ₹600 – ₹800
ಅ. 17 ರ ಟಿಕೆಟ್ ದರ : ₹1300 – ₹4590 - ಬೆಂಗಳೂರು – ಮಂಗಳೂರು
ಇಂದಿನ ದರ : ₹600 – ₹950
ಅ. 17 ರ ಟಿಕೆಟ್ ದರ : ₹2500 – ₹3500
ದೀಪಾವಳಿ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವ ಮೊದಲು ದರವನ್ನು ಎರಡು-ಮೂರು ಆಪರೇಟರ್‌ಗಳೊಂದಿಗೆ ಹೋಲಿಕೆ ಮಾಡಿ. KSRTC ಆನ್‌ಲೈನ್ ಪೋರ್ಟಲ್‌ನಲ್ಲಿ ಟಿಕೆಟ್ ಲಭ್ಯತೆಯನ್ನು ಪರಿಶೀಲಿಸಿ, ಸಾಧ್ಯವಾದರೆ ಒಂದು ವಾರ ಮುಂಚಿತವಾಗಿ ಬುಕ್ ಮಾಡಿ. ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಬಿಲ್‌ನೊಂದಿಗೆ ದರವನ್ನು ಖಚಿತಪಡಿಸಿಕೊಳ್ಳಿ. ದೀಪಾವಳಿಯ ಸಂತೋಷವನ್ನು ದರ ಏರಿಕೆ ಕದಡದಿರಲಿ, ಸುರಕ್ಷಿತವಾಗಿ ಪ್ರಯಾಣಿಸಿ