ದಾವಣಗೆರೆ (ಮಾ.03): ದಾವಣಗೆರೆ ನಗರವು ಅಪರೂಪದ ಆತ್ಮೀಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಲೌಕಿಕ ಸುಖ-ಸಂತೋಷ, ಆಸ್ತಿ-ಐಶ್ವರ್ಯ, ಕುಟುಂಬ ಬಂಧಗಳನ್ನು ತ್ಯಜಿಸಿ ಉದ್ಯಮಿ ದಂಪತಿ ಹಾಗೂ ಇಬ್ಬರು ಯುವತಿಯರು ಕಠಿಣ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ನಾಲ್ವರು ಮುಮುಕ್ಷುಗಳಿಗೆ ದೀಕ್ಷಾ ದಾನ
ಆಚಾರ್ಯ ಶ್ರೀ ಅಭಯ್ ಶೇಖರ್ ಸುರೀಶ್ವರ ಜೀ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಪುಣೆಯ ಸಿಂಬಯೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುವ 30 ವರ್ಷದ ಕ್ರುನಾಲಿ ಜೈನ್ ಹಾಗೂ ದಾವಣಗೆರೆಯ 28 ವರ್ಷದ ಬಿ.ಕಾಂ ಪದವೀಧರೆ ದೀಕ್ಷಿತಾ ಜೈನ್ ಅವರು ಸನ್ಯಾಸತ್ವದ ದೀಕ್ಷೆ ಪಡೆದರು.
ಇದೇ ವೇಳೆ ದಾವಣಗೆರೆಯ ಪ್ರಸಿದ್ಧ ಲಲಿತ್ ಗಾರ್ಮೆಂಟ್ಸ್‌ನ ಮಾಲೀಕರಾದ 52 ವರ್ಷದ ಭರತ್ ಜೈನ್ ಹಾಗೂ ಅವರ ಪತ್ನಿ 50 ವರ್ಷದ ಆರತಿ ಬೇನ್ ಕೂಡ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕೋಟ್ಯಂತರ ರೂಪಾಯಿಯ ಹಣ ಮತ್ತು ಆಸ್ತಿಯನ್ನು ದಾನ ಮಾಡಿ, ಸಂಪೂರ್ಣ ತ್ಯಾಗದ ಜೀವನಕ್ಕೆ ಅವರು ಪಾದಾರ್ಪಣೆ ಮಾಡಿದ್ದಾರೆ. ವ್ಯಾಪಾರದಲ್ಲಿ ಯಶಸ್ಸು ಕಂಡು, ಸುಖಸಮೃದ್ಧ ಜೀವನ ನಡೆಸುತ್ತಿದ್ದ ದಂಪತಿ ಇಂತಹ ನಿರ್ಧಾರ ಕೈಗೊಂಡಿರುವುದು ಎಲ್ಲರ ಗಮನ ಸೆಳೆದಿದೆ.
ಕ್ರುನಾಲಿ ಜೈನ್ ಅವರು ಕಮಲೇಶ್ ಜೈನ್ ಮತ್ತು ಬಬಿತಾ ಜೈನ್ ಅವರ ಪುತ್ರಿಯಾಗಿದ್ದು, ದೀಕ್ಷಿತಾ ಜೈನ್ ಅವರು ದಾವಣಗೆರೆಯ ಅರುಣ್ ಕುಮಾರ್ ಜೈನ್ ಹಾಗೂ ಅನ್ನಪೂರ್ಣ ಬಾಯಿ ಅವರ ಪುತ್ರಿಯಾಗಿದ್ದಾರೆ. ಕುಟುಂಬದ ಬೆಂಬಲದೊಂದಿಗೆ ಈ ದಾರಿಯನ್ನು ಹಿಡಿದಿರುವುದು ಇವರ ನಿರ್ಧಾರಕ್ಕೆ ಮತ್ತಷ್ಟು ಮಹತ್ವ ನೀಡಿದೆ.
ಇನ್ನು ಭರತ್ ಜೈನ್-ಆರತಿ ಬೇನ್ ದಂಪತಿಯ ಕುಟುಂಬದಲ್ಲಿ ಇದು ಮೊದಲ ಘಟನೆ ಅಲ್ಲ. ಮೂರು ವರ್ಷಗಳ ಹಿಂದೆ ಅವರಿಬ್ಬರು ಪುತ್ರರು ಕೂಡ ಸನ್ಯಾಸತ್ವ ಸ್ವೀಕರಿಸಿದ್ದರು. ಮುನಿ ಶ್ರೀ ಮಗ್ನಶೇಖರ್ ವಿಜಯ್ ಜಿ ಮತ್ತು ಮುನಿ ಶ್ರೀ ಪೂರ್ಣ ಶೇಖರ್ ವಿಜಯ್ ಜಿ ಎಂಬ ದೀಕ್ಷಾ ನಾಮಗಳನ್ನು ಪಡೆದ ಅವರು ಈಗ ಧಾರ್ಮಿಕ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಪೋಷಕರು ಕೂಡ ಅದೇ ಮಾರ್ಗವನ್ನು ಆರಿಸಿಕೊಂಡಿದ್ದಾರೆ..
ಜೈನ ಧರ್ಮದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸುವುದು ಅತ್ಯಂತ ಕಠಿಣವಾದ ಆಚರಣೆ. ಇದು ಕೇವಲ ಒಂದು ಸಂಪ್ರದಾಯವಲ್ಲ, ಜೀವನಪರ್ಯಂತದ ತ್ಯಾಗದ ಪ್ರತಿಜ್ಞೆ. ದೀಕ್ಷೆ ಪಡೆದವರು ಬರಿಗಾಲಿನಲ್ಲಿ ನಡೆಯಬೇಕು. ಅತಿಸೂಕ್ಷ್ಮ ಜೀವಿಗಳಿಗೆ ಹಾನಿಯಾಗದಂತೆ ನಡೆದುಕೊಳ್ಳಬೇಕು.. ಮೊಬೈಲ್, ವಾಹನ, ವಿದ್ಯುತ್ ಸೇರಿದಂತೆ ಯಾವುದೇ ಭೌತಿಕ ಸೌಲಭ್ಯಗಳನ್ನು ಬಳಸುವುದಿಲ್ಲ. ಆಹಾರವನ್ನು ಕೂಡ ನಿಯಮಿತ ವಿಧಿಗಳಂತೆ ಸ್ವೀಕರಿಸಬೇಕು.
ಈ ನಾಲ್ವರು ಮುಮುಕ್ಷುಗಳು ಲೌಕಿಕ ಜೀವನದ ಆಕರ್ಷಣೆಯನ್ನು ತೊರೆದು ಕಠಿಣ ನಿಯಮ-ನಿಷ್ಠೆಗಳ ಸನ್ಯಾಸ ಜೀವನವನ್ನು ಆರಿಸಿಕೊಂಡಿರುವುದು ಸಮಾಜಕ್ಕೆ ದೊಡ್ಡ ಸಂದೇಶವಾಗಿದೆ. ದಾವಣಗೆರೆಯಲ್ಲಿ ನಡೆದ ಈ ದೀಕ್ಷಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.





