ದಾವಣಗೆರೆ: ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ನಡೆಸಿದ ಭಾರೀ ಡ್ರಗ್ಸ್ ದಾಳಿ ಬಳಿಕ, ಕರ್ನಾಟಕದ ದಾವಣಗೆರೆಯಲ್ಲಿ ಡ್ರಗ್ಸ್ ಜಾಲದ ಮತ್ತೊಂದು ದೊಡ್ಡ ಮುಖ ಬಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳ ಪೈಕಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಪ್ತ ಶಾಮನೂರು ವೇದಮೂರ್ತಿ ಸೇರಿದ್ದಾರೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳಿಂದ ಎಂಡಿಎಂಎ ಸೇರಿದಂತೆ ಸಿಂಥೆಟಿಕ್ ಡ್ರಗ್ಸ್, ಡ್ರಗ್ಸ್ ತಯಾರಿಕೆಗೆ ಬಳಸುವ ವಸ್ತುಗಳು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಆರೋಪಿಗಳ ಬಂಧನವಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಅವರ ಆಪ್ತನೆಂದು ಹೇಳಲಾಗುತ್ತಿರುವ ಅನ್ವರ್ ಬಾಷಾ ಸೇರಿದಂತೆ ಪಾರಸ್, ಕೃಷ್ಣಮೂರ್ತಿ ಹಾಗೂ ಮಂಜುನಾಥ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ಜಾಲದಲ್ಲಿ ಸಚಿವರ ಆಪ್ತರೇ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಸಚಿವ ಬೈರತಿ ಸುರೇಶ್, “ಸಚಿವರ ಜೊತೆ ಫೋಟೋ ಇದ್ದ ಮಾತ್ರಕ್ಕೆ ಎಲ್ಲರೂ ಆಪ್ತರಾಗುವುದಿಲ್ಲ. ನಮ್ಮೊಂದಿಗೆ ಅನೇಕರು ಫೋಟೋ ತೆಗೆಸಿಕೊಳ್ಳುತ್ತಾರೆ. ಅದನ್ನೇ ಆಧಾರ ಮಾಡಿಕೊಂಡು ಯಾರನ್ನಾದರೂ ಆಪ್ತ ಎಂದು ಕರೆಯುವುದು ಸರಿಯಲ್ಲ” ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ..





