ದಾವಣಗೆರೆ: ಸಾಮಾಜಿಕ ಕಾರ್ಯಕರ್ತ ಹಾಗೂ ಜೆಡಿಎಸ್ ಮುಖಂಡ ಟಿ. ಅಸ್ಸರ್ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಖಾಲಿದ್ ಪೈಲ್ವಾನ್‌ಗೆ ಆರ್ಥಿಕ ನೆರವು ಮತ್ತು ಆಶ್ರಯ ಒದಗಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ ನಾಯ್ಕರನ್ನು ದಾವಣಗೆರೆ ಆಜಾದ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 10ರಂದು ಸಂಜೆ ದಾವಣಗೆರೆಯ ಭಾಷಾ ನಗರದ ಐದನೇ ಕ್ರಾಸ್‌ನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ಟಿ. ಅಸ್ಸರ್ ಅವರನ್ನು ಅಡ್ಡಗಟ್ಟಿದ ಖಾಲಿದ್ ಪೈಲ್ವಾನ್ ಮತ್ತಿಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಗಂಭೀರ ಗಾಯಗೊಂಡ ಅಸ್ಸರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಗುಣಮುಖರಾಗುತ್ತಿದ್ದಾರೆ. ಹಳೇ ದ್ವೇಷವೇ ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಖಾಲಿದ್ ಪೈಲ್ವಾನ್ ನಾಪತ್ತೆಯಾಗಿದ್ದ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತೀವ್ರ ಹುಡುಕಾಟ ಆರಂಭವಾಯಿತು. ಆದರೆ ಆರೋಪಿ ಎಲ್ಲಿ ಹೋದ ಎಂಬುದು ಯಾರಿಗೂ ಗೊತ್ತಿರಲಿಲ್ಲ. ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿತು. ಕಾಂಗ್ರೆಸ್‌ನ ಪ್ರಮುಖ ಮುಖಂಡೆ ಸವಿತಾಬಾಯಿ ಮಲ್ಲೇಶ ನಾಯ್ಕ ಅವರೇ ಆತನಿಗೆ ಆಶ್ರಯ ಮತ್ತು ಹಣದ ಸಹಾಯ ಮಾಡುತ್ತಿದ್ದರು ಎಂಬ ಮಾಹಿತಿ ಬಯಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಹಲ್ಲೆ ನಡೆದ ಒಂದೇ ವಾರದೊಳಗೆ ಖಾಲಿದ್ ಮತ್ತು ಸವಿತಾ ಇಬ್ಬರೂ ಗೋವಾ, ದೆಹಲಿ ಸೇರಿದಂತೆ ಹಲವು ನಗರಗಳಿಗೆ ರಹಸ್ಯ ಪ್ರವಾಸ ಮಾಡಿದ್ದಾರೆ. ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ, ಆರಾಮವಾಗಿ ಸುತ್ತಾಡಿದ್ದಾರೆ. ಇದಕ್ಕೆಲ್ಲ ದೊಡ್ಡ ಮೊತ್ತದ ಹಣ ಖರ್ಚಾಗಿದೆ. ಆ ಹಣವನ್ನೂ ಸವಿತಾ ಅವರೇ ಒದಗಿಸಿದ್ದಾರೆ ಎನ್ನಲಾಗಿದೆ.
ಯಾರು ಈ ಸವಿತಾಬಾಯಿ ಮಲ್ಲೇಶ ನಾಯ್ಕ?
ದಾವಣಗೆರೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಆಶಿಸಿದ್ದವರು. ಟಿಕೆಟ್ ಸಿಗದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ನಂತರ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು. ಜಿಲ್ಲೆಯಲ್ಲಿ ಗಣ್ಯ ವ್ಯಕ್ತಿಯಾಗಿ, ಮಹಿಳಾ ಘಟಕದ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದವರು. ಆದರೆ ಈಗ ಕೊಲೆ ಯತ್ನ ಆರೋಪಿಗೆ ನೆರವು ನೀಡಿದ ಆರೋಪದಲ್ಲಿ ಜೈಲಿಗೆ ಹೋಗುವ ಸ್ಥಿತಿ ಎದುರಾಗಿದೆ.
ಪೊಲೀಸರು ತಾಂತ್ರಿಕ ತನಿಖೆ, ಮೊಬೈಲ್ ಲೊಕೇಷನ್, ಹೋಟೆಲ್ ರೆಕಾರ್ಡ್‌ಗಳು ಮತ್ತು ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿ ಇಬ್ಬರ ಚಲನವಲನಗಳನ್ನು ಟ್ರೇಸ್ ಮಾಡಿದ್ದಾರೆ. ಅಂತಿಮವಾಗಿ ಬೆಂಗಳೂರಿನಲ್ಲಿ ಸವಿತಾ ಅವರನ್ನು ಬಂಧಿಸಲಾಯಿತು.





