ಬಾಗಲಕೋಟೆ: ಬಾದಾಮಿ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ತಡರಾತ್ರಿ ಮಿನಿ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ ಸೈಕಲ್ ಅಂಗಡಿಯ ಮಾಲೀಕ ದಾದಾಫಿರ್ ಜಮಾದಾರ್ ಮತ್ತು ಮೂವರು ಹೋಮ್ ಗಾರ್ಡ್‌ಗಳು ಗಾಯಗೊಂಡಿದ್ದು, ಎಲ್ಲರನ್ನೂ ಬಾದಾಮಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಾದಾಮಿ ಪಟ್ಟಣದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದ ಬಂದೋಬಸ್ತ್‌ಗಾಗಿ ಹೋಮ್ ಗಾರ್ಡ್‌ಗಳು ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ದಾದಾಫಿರ್ ಜಮಾದಾರ್‌ರ ಸೈಕಲ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಲು ಹೋಮ್ ಗಾರ್ಡ್‌ಗಳು ಮತ್ತು ಅಂಗಡಿಯ ಮಾಲೀಕ ದಾದಾಫಿರ್ ಅಂಗಡಿಯ ಬಾಗಿಲು ತೆರೆಯಲು ಮುಂದಾದರು. ಆದರೆ, ಅಂಗಡಿಯ ಬಳಿ ತಲುಪುತ್ತಿದ್ದಂತೆ ಒಂದು ಮಿನಿ ಸಿಲಿಂಡರ್ ಭಯಾನಕವಾಗಿ ಸ್ಫೋಟಗೊಂಡಿತ್ತು. ಇದರಿಂದ ದಾದಾಫಿರ್ ಮತ್ತು ಮೂವರು ಹೋಮ್ ಗಾರ್ಡ್‌ಗಳಿಗೆ ಗಂಭೀರ ಗಾಯಗಳಾದ್ದವು.
ಈ ಘಟನೆಯಲ್ಲಿ ಒಟ್ಟು ಐದು ಮಿನಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ. ಈ ಸಿಲಿಂಡರ್‌ಗಳನ್ನು ಸೈಕಲ್ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸ್ಫೋಟದ ಶಬ್ದ ಕೇಳಿದ ಜನರು ಓಡಿಹೋಗಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.