ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನ ಐತಿಹಾಸಿಕ ಕಬ್ಬನ್ ಪಾರ್ಕ್ ಅನ್ನು ಉನ್ನತೀಕರಿಸಲು 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಇದರ ಜೊತೆಗೆ, ಉದ್ಯಾನದ ಆವರಣದಲ್ಲಿ ಯಾವುದೇ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದಾರೆ.ಭಾನುವಾರ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ನಾಗರಿಕರೊಂದಿಗಿನ ಸಂವಾದದಲ್ಲಿ ಇದನ್ನ ಹೇಳಿದ್ದಾರೆ.
ನಾಗರಿಕರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಡಿಸಿಎಂ, ಬಿಡಿಎಯಿಂದ 5 ಕೋಟಿ ಬಿಡುಗಡೆಯಾಗುವುದು ಖಚಿತವೆಂದು ಭರವಸೆ ನೀಡಿದ್ದಾರೆ. ಉಳಿದ ಅಗತ್ಯ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ಒದಗಿಸುವಂತೆ ವ್ಯವಸ್ಥೆ ಮಾಡುತ್ತೇನೆ. ಉದ್ಯಾನದ ರಕ್ಷಣೆಗೆ ಆದ್ಯತೆ ನೀಡಿ, ಯಾವುದೇ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ರೀತಿ ಲಾಲ್‌ಬಾಗ್‌ಗೆ 10 ಕೋಟಿ ಈಗಾಗಲೇ ಘೋಷಿಸಿರುವುದಾಗಿ ತಿಳಿಸಿದರು.
ಪಾರ್ಕ್‌ನ ಸುರಕ್ಷತೆ ಖಾತರಿಪಡಿಸಲು ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗುವುದು. ಯಾರು ಎಷ್ಟು ಗಂಟೆಗೆ ಬಂದರು, ಹೋದರು ಎಂಬ ದಾಖಲೆ ಇರಬೇಕು. ಆಯುಕ್ತರ ಕಚೇರಿಯಿಂದಲೂ ರಿಯಲ್ ಟೈಮ್ ಮಾನಿಟರಿಂಗ್ ಸಾಧ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ, ಸರ್ಕಾರಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವ ಯೋಜನೆಯೂ ಇದೆ.
ಅರಣ್ಯ ಇಲಾಖೆಯ ಜಾಗಗಳಲ್ಲಿ ಕಬ್ಬನ್-ಲಾಲ್‌ಬಾಗ್ ಮಾದರಿಯ ಟ್ರೀ ಪಾರ್ಕ್‌ಗಳು ಸ್ಥಾಪನೆಯಾಗಲಿವೆ. ಯಾವುದೇ ಮರ ಕಡಿಯುವುದಿಲ್ಲ. ಕಾಡು ಸಂರಕ್ಷಣೆಯೂ ಆಗುತ್ತದೆ, ನಗರಕ್ಕೆ ಹಸಿರು ಉಸಿರು ಸಿಗುತ್ತದೆ ಎಂದು ಡಿಸಿಎಂ ತಿಳಿಸಿದರು.
ವಕೀಲರು ಮತ್ತು ಮುಖ್ಯ ನ್ಯಾಯಮೂರ್ತಿಗಳ ಮನವಿಯಂತೆ ಹೈಕೋರ್ಟ್ ಸ್ಥಳಾಂತರಕ್ಕೆ 15-20 ಎಕರೆ ಜಾಗ ಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಅವರು, ನಗರದೊಳಗೇ, ಕಕ್ಷಿದಾರರು-ವಕೀಲರಿಗೆ ಅನುಕೂಲವಾಗುವ ಹತ್ತಿರದ ಸ್ಥಳ ಗುರುತಿಸುತ್ತೇವೆ. ರೇಸ್ ಕೋರ್ಸ್ ಜಾಗ ಕುರಿತು ಕಾನೂನು ತೊಡಕುಗಳಿವೆ, ಆದರೆ ಪರಿಶೀಲಿಸುತ್ತೇವೆ ಎಂದರು.





