ಚಿಕ್ಕಮಗಳೂರು: ಕೇವಲ ಹಣದ ಆಸೆಗಾಗಿ ತನ್ನ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಅಮಾನವೀಯ ಕೃತ್ಯ ಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಸಂತ್ರಸ್ತ ತಾಯಿ ಕಳೆದುಕೊಂಡ ನಂತರ ಅವಳ ಸಂಬಂಧಿಕರ ಮನೆಯಲ್ಲಿ ವಾಸವಿದ್ದಳು. ಅಲ್ಲೇ ಪಿಯುಸಿವರೆಗೆ ವಿದ್ಯಾಭ್ಯಾಸ ಕೂಡ ಮುಗಿಸಿದ್ದಳು. ಇತ್ತೀಚೆಗಷ್ಟೇ ತಂದೆಯ ಮನೆಗೆ ಮರಳಿದ್ದ ಬಾಲಕಿಯನ್ನು ಡಿಸೆಂಬರ್ ತಿಂಗಳಲ್ಲಿ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಭರತ್ ಶೆಟ್ಟಿ ಎಂಬ ದಂಧೆಕೋರನ ಪರಿಚಯವಾಗಿದ್ದು, ತಂದೆಯೊಂದಿಗೆ ಸಲುಗೆ ಬೆಳೆಸಿದ್ದ. ದಿನಕ್ಕೆ 5 ಸಾವಿರ ರೂಪಾಯಿ ಹಣ ಸಿಗುತ್ತದೆ ಎಂಬ ಆಮಿಷಕ್ಕೆ ಬಲಿಯಾದ ತಂದೆ, ತನ್ನ ಅವರಿಗೆ ಒಪ್ಪಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪೈಶಾಚಿಕ ಕೃತ್ಯ:
ತಂದೆಯ ಸೂಚನೆಯಂತೆ ಬಾಲಕಿ ಭರತ್ ಶೆಟ್ಟಿಯೊಂದಿಗೆ ಮಂಗಳೂರಿಗೆ ತೆರಳಿದ್ದಳು. ಮಾರ್ಗಮಧ್ಯದಲ್ಲಿ ತಾನು ಮುಟ್ಟಾಗಿರುವುದಾಗಿ (ಋತುಸ್ರಾವ) ತಂದೆಗೆ ತಿಳಿಸಿ ಮನೆಗೆ ಮರಳುವಂತೆ ವಿನಂತಿಸಿದ್ದರೂ, ತಂದೆ ಅದಕ್ಕೆ ಕಿವಿಗೊಡದೇ ಆಕೆಯನ್ನ ಅವನೊಟ್ಟಿಗೆ ಹೋಗಲು ಒತ್ತಾಯಿಸಿದ್ದಾನೆ.ನಂತರ ಮಂಗಳೂರಿನಲ್ಲಿ ಭರತ್ ಶೆಟ್ಟಿ ಬಾಲಕಿಯನ್ನು ದೈಹಿಕ ಸಂಪರ್ಕಕ್ಕಾಗಿ ಒತ್ತಾಯಿಸಿದ್ದಾನೆ. ನಾವು ಭರತ್ ಶೆಟ್ಟಿಗೆ ಹಣ ನೀಡಿದ್ದೇವೆ ಎಂದು ಹೇಳುತ್ತಾ 20 ರಿಂದ 45 ವರ್ಷದ ನಾಲ್ವರು ಕಾಮುಕರು ಎರಡು ದಿನಗಳ ಕಾಲ ಸತತವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿ ತಾನು ಅಪ್ರಾಪ್ತೆ ಎಂದು ಎಷ್ಟೇ ಬೇಡಿಕೊಂಡರೂ ಆಕೆಯನ್ನ ಬಿಡದೇ ಈ ಕೃತ್ಯ ಎಸಗಿದ್ದಾರೆ.
ಪೊಲೀಸ್ ಕಾರ್ಯಚರಣೆ
ಬಾಲಕಿ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಬಾಲಕಿಯ ತಂದೆ, ಅಜ್ಜಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್‌ಪಿನ್ ಭರತ್ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಿದ್ದಾರೆ. ಭರತ್ ಶೆಟ್ಟಿ ವಿರುದ್ಧ ಈಗಾಗಲೇ ಮಂಗಳೂರು ಮತ್ತು ಉಡುಪಿಯಲ್ಲಿ 8ಕ್ಕೂ ಹೆಚ್ಚು ವೇಶ್ಯಾವಾಟಿಕೆ ಪ್ರಕರಣಗಳು ದಾಖಲಾಗಿವೆ.
ಬೀರೂರು ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.





