ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಸಿಜೆ ರಾಯ್ (CJ Roy) ಅವರ ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಶುಕ್ರವಾರ ಮಧ್ಯಾಹ್ನ ನಡೆದ ಈ ದುರ್ಘಟನೆಯ ನಿಖರ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಈ ಘಟನೆಯ ಕುರಿತು ಆರಂಭಿಕ ತನಿಖೆ ನಡೆಸಲಾಗುತ್ತಿದ್ದು, ಆತ್ಮಹತ್ಯೆ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಎಲ್ಲ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದರೆ, ಪ್ರಕರಣದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂಬುದು ತನಿಖೆಗೆ ಮತ್ತಷ್ಟು ಗೊಂದಲವನ್ನುಂಟು ಮಾಡಿದೆ.
ಈ ಮಧ್ಯೆ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಸಿಜೆ ರಾಯ್ ಅವರ ಸಾವು ಸಾಮಾನ್ಯ ಪ್ರಕರಣವಲ್ಲ. ಸತ್ಯಾಂಶ ಹೊರಬರಲು ಉನ್ನತ ಮಟ್ಟದ ತನಿಖೆ ಅಗತ್ಯ” ಎಂದು ಸ್ಪಷ್ಟಪಡಿಸಿದ್ದು, ಅಗತ್ಯವಿದ್ದರೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವುದಾಗಿ ಸೂಚಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ (DG & IGP) ಸಲೀಂ ಅವರು ಕೂಡ ಪ್ರಕರಣದ ಬಗ್ಗೆ ಕಣ್ಣಿಟ್ಟಿದ್ದು, ಬೆಂಗಳೂರು ಪೊಲೀಸ್ ಕಮಿಷನರ್‌ನಿಂದ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದಾರೆ. ತನಿಖೆ ಬಗ್ಗೆ, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತ, ಘಟನೆ ನಡೆದ ಸಮಯದಲ್ಲಿ ಸಿಜೆ ರಾಯ್ ಅವರ ಕುಟುಂಬ ಸದಸ್ಯರು ವಿದೇಶದಲ್ಲಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಅವರ ಪತ್ನಿ ಮತ್ತು ಮಕ್ಕಳು ತಕ್ಷಣವೇ ಬೆಂಗಳೂರಿಗೆ ಆಗಮಿಸಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಮೃತದೇಹವನ್ನು ವೀಕ್ಷಿಸಿದ್ದಾರೆ..
ಮೃತದೇಹವನ್ನು ಪ್ರಸ್ತುತ ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೋಸ್ಟ್‌ಮಾರ್ಟಂ ವರದಿಯೇ ಮುಂದಿನ ತನಿಖೆಗೆ ಮಹತ್ವದ ಸುಳಿವು ನೀಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದವರು ಭಾನುವಾರ ರ್ಜಾಪುರದಲ್ಲಿರುವ ತಮ್ಮ ತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದಾರೆ. ಅಂತಿಮ ವಿಧಿವಿಧಾನಗಳಿಗೆ ಸಿದ್ಧತೆಗಳು ಆರಂಭವಾಗಿದ್ದು, ಉದ್ಯಮ ವಲಯದ ಗಣ್ಯರು, ರಾಜಕೀಯ ನಾಯಕರು ಹಾಗೂ ಆತ್ಮೀಯರು ಅಂತಿಮ ನಮನ ಸಲ್ಲಿಸುವ ನಿರೀಕ್ಷೆಯಿದೆ.





