ಚಿತ್ರದುರ್ಗ: ಹೊಳಲ್ಕೆರೆ-ಚಿತ್ರದುರ್ಗ ರಸ್ತೆಯ ಈರಜ್ಜನಹಟ್ಟಿ ಗೇಟ್ ಬಳಿ ಕೆಎಸ್ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಪ್ರಾಣ ಬಿಟ್ಟಿದ್ದಾನೆ. ಸೋಮವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ ಬೈಕ್ ಸಂಪೂರ್ಣವಾಗಿ ಜಖಮ್ ಆಗಿದೆ.
ಅಪಘಾತ ಚಿತ್ರದುರ್ಗದ ಹೊರವಲಯದಲ್ಲಿರುವ ಈರಜ್ಜನಹಟ್ಟಿ ಗೇಟ್ ಬಳಿ ಸಂಭವಿಸಿದೆ. ಮಾರುತಿ (35) ಎಂಬ ಯುವಕ ಸಿದ್ದಾಪುರ ಗ್ರಾಮದ ನಿವಾಸಿಯಾಗಿದ್ದು, ಬಂಜಿಗೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರು ಚಲಾಯಿಸುತ್ತಿದ್ದ ಬೈಕ್ ಮೇಲೆ ಹೊಳಲ್ಕೆರೆ ಕಡೆಯಿಂದ ಚಿತ್ರದುರ್ಗದೆಡೆಗೆ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಜಖಮ್ ಆಗಿದ್ದು, ಬೈಕ್ ಸವಾರ ಮಾರುತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.