ಚಿತ್ರದುರ್ಗ: ರಾಜ್ಯದಲ್ಲಿ ಕ್ರಿಸ್‌ಮಸ್ ಹಬ್ಬದ ರಜೆಯ ಸಂಭ್ರಮ ಮನೆ ಮಾಡಿದ್ದ ಹೊತ್ತಲ್ಲೇ ಚಿತ್ರದುರ್ಗದಲ್ಲಿ ದುರಂತವೊಂದು ಸಂಭವಿಸಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿಯ ಗೊರ್ಲತ್ತು ಕ್ರಾಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಬೆಂಕಿಗಾಹುತಿಯಾಗಿದ್ದು, ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.
ಬೆಂಗಳೂರಿನಿಂದ ಗೋಕರ್ಣದತ್ತ ಪ್ರಯಾಣಿಸುತ್ತಿದ್ದ ಸೀಬರ್ಡ್ ಪ್ರೈವೇಟ್ ಸ್ಲೀಪರ್ ಬಸ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಹೊರಟಿದ್ದ ಈ ಪ್ರಯಾಣಿಕರು ಗೊರ್ಲತ್ತು ಕ್ರಾಸ್ ತಲುಪಿದಾಗ, ಹಿರಿಯೂರಿನಿಂದ ಬೆಂಗಳೂರಿನತ್ತ ಅತಿ ವೇಗವಾಗಿ ಬರುತ್ತಿದ್ದ ಕಂಟೈನರ್ ಲಾರಿಯ ಚಾಲಕನ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ದುರಂತದಲ್ಲಿ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವೇಗವಾಗಿ ಬಂದ ಕಂಟೈನರ್ ನಿಯಂತ್ರಣ ತಪ್ಪಿ ರಸ್ತೆಯ ನಡುವಿನ ಡಿವೈಡರ್ ಹಾರಿ, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಬಸ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಡೀಸೆಲ್ ಟ್ಯಾಂಕ್ ಒಡೆದಿದೆ. ನೋಡನೋಡುತ್ತಿದ್ದಂತೆಯೇ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.
ಬಸ್ ಬೆಂಕಿಗೆ ಆಹುತಿಯಾದಾಗ ಹೆಚ್ಚಿನ ಪ್ರಯಾಣಿಕರು ನಿದ್ರೆಗೆ ಜಾರಿದ್ದರು. ಬೆಂಕಿ ಕ್ಷಣಾರ್ಧದಲ್ಲಿ ಬಸ್ಸನ್ನು ಆವರಿಸಿದ್ದರಿಂದ ಹೊರಗೆ ಬರಲು ದಾರಿ ಕಾಣದೆ 20ಕ್ಕೂ ಹೆಚ್ಚು ಪ್ರಯಾಣಿಕರು ಬಸ್ಸಿನ ಒಳಗೆ ಸಜೀವ ದಹನವಾಗಿದ್ದಾರೆ. ಅದೃಷ್ಟವಶಾತ್ ಒಂಬತ್ತು ಮಂದಿ ಪ್ರಯಾಣಿಕರು ಕಿಟಕಿಗಳ ಮೂಲಕ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹಿರಿಯೂರು ಮತ್ತು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಭೀತಿ ಎದುರಾಗಿದೆ.
ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಅಷ್ಟರಲ್ಲಾಗಲೇ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 4 ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





