ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದ ಕಾಲ್ತುಳಿತ ಘಟನೆಗೆ ತಮ್ಮ ಸಂಸ್ಥೆಗಳನ್ನು ಹೊಣೆ ಮಾಡಬಾರದು ಎಂದು ಆರ್ಸಿಬಿ ಪರ ವಕೀಲರು ಹೈಕೋರ್ಟ್ನಲ್ಲಿ ವಾದಿಸಿದ್ದಾರೆ. ಕಳೆದ ಜೂನ್ನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ರದ್ದು ಕೋರಿ ಆರ್ಸಿಬಿ, ಕೆಎಸ್ಎಸ್ಸಿಎ ಮತ್ತು ಡಿಎನ್ಎ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು.
ಆರ್ಸಿಬಿ ಪರ ವಕೀಲರ ವಾದ
ಆರ್ಸಿಬಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ವಾದದಲ್ಲಿ, “ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಮ್ಮ ಸಂಸ್ಥೆಗಳನ್ನು ಹೊಣೆ ಮಾಡಬಾರದು. ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ನಮ್ಮ ಅರ್ಜಿಯನ್ನು ಮೊದಲು ಪರಿಗಣಿಸಬೇಕು. ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಈ ಆದೇಶವಿರುವಾಗ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಬಾರದು” ಎಂದು ಮನವಿ ಮಾಡಿದ್ದಾರೆ.
ಸರ್ಕಾರದ ಮಧ್ಯಂತರ ಅರ್ಜಿ
ಇದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರದ ಪರ ವಕೀರರಾದ ಎಸ್ಪಿಪಿ ಬಿ.ಟಿ.ವೆಂಕಟೇಶ್ ಅವರು, ಪ್ರಕರಣದ ಚಾರ್ಜ್ಶೀಟ್ ಸಿದ್ಧವಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಆರ್ಸಿಬಿ, ಕೆಎಸ್ಎಸ್ಸಿಎ ಮತ್ತು ಡಿಎನ್ಎ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಅವರು ಕೋರಿದ್ದಾರೆ.
ವಿಚಾರಣೆ ಮುಂದೂಡಿಕೆ
ಇಬ್ಬರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಂತಿಮ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಅಂತಿಮ ವರದಿ ಸಲ್ಲಿಸದಂತೆ ನೀಡಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ. ಮಾರ್ಚ್ 14ರೊಳಗೆ ಕೋರ್ಟ್ಗೆ ಆಕ್ಷೇಪಣೆ ಮತ್ತು ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿದೆ.
ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್
ಇತ್ತ ಈ ಕಾನೂನು ಹೋರಾಟದ ನಡುವೆಯೇ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳಿಗೆ ಅನುಮತಿ ಲಭಿಸಿದೆ. ಕಾಲ್ತುಳಿತ ದುರಂತದ ಬಳಿಕ ಸರ್ಕಾರ ಪಂದ್ಯಗಳ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿತ್ತು. ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯ ಸೇರಿದಂತೆ ಒಟ್ಟು 7 ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯಲಿವೆ. ಆರ್ಸಿಬಿ ತನ್ನ ತವರಿನಲ್ಲಿ 5 ಪಂದ್ಯಗಳನ್ನು ಆಡಲಿದ್ದು, ಉಳಿದ 2 ಪಂದ್ಯಗಳನ್ನು ಛತ್ತೀಸ್ಗಢದ ರಾಯಪುರ ಮೈದಾನದಲ್ಲಿ ಆಡಲಿದೆ.
ಏನದು ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ?
ಕಳೆದ ವರ್ಷ ಜೂನ್ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದರು. ಈ ದುರಂತದ ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಸರ್ಕಾರ ನಿರ್ಬಂಧ ಹೇರಿತ್ತು. ಕಳೆದ ತಿಂಗಳು ಸರ್ಕಾರ ಈ ನಿರ್ಬಂಧವನ್ನು ತೆರವುಗೊಳಿಸಿ, ಪಂದ್ಯಗಳಿಗೆ ಅನುಮತಿ ನೀಡಿತ್ತು. ಈಗ ಕಾನೂನು ಹೋರಾಟದ ನಡುವೆಯೇ ಐಪಿಎಲ್ ಪಂದ್ಯಗಳು ನಿಗದಿತ ಸಮಯಕ್ಕೆ ಆರಂಭವಾಗಲಿವೆ.




