ಚಿಕ್ಕಮಗಳೂರು, ಮಾ.28 (ಕಾಫಿನಾಡು ವರದಿ): ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹವಾಮಾನ ದಿಢೀರ್ ಬದಲಾವಣೆ ಕಂಡಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಮಳೆಯ ಅಬ್ಬರ ತೀವ್ರಗೊಂಡಿದ್ದು, ರಸ್ತೆಗಳು ನದಿಯಂತಾಗಿದೆ.
ನಗರದಾದ್ಯಂತ ಬಿರುಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಪರದಾಡುವ ಪರಿಸ್ರೆಥಿತಿ ಉಂಟಾಯಿತು. ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭಾರೀ ಮಳೆಯಾಗುತ್ತಿದೆ.
ಮೂಡಿಗೆರೆ ಪಟ್ಟಣದಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳಲ್ಲಿ ಮಳೆನೀರು ಹರಿಯುವ ದೃಶ್ಯ ಕಂಡುಬಂದಿದೆ. ಭಾರೀ ಗಾಳಿಯಿಂದಾಗಿ ರಸ್ತೆಗೆ ಅಡ್ಡಲಾಗಿ ತೆಂಗಿನ ಮರಗಳು ಉರುಳಿಬಿದ್ದಿದ್ದು, ದೊಡ್ಡ ಅನಾಹುತ ತಪ್ಪಿದೆ.
ಮೂಡಿಗೆರೆ ತಾಲೂಕಿನ ರಸ್ತೆಬದಿ ಪಾರ್ಕ್ ಮಾಡಿದ್ದ ಕಾರಿನ ಮೇಲೆ ಮರವೊಂದು ಬಿದ್ದು ಜಖಂಗೊಂಡಿದೆ. ಆದರೆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಚಾರ್ಮಾಡಿ ಘಾಟಿಯ ತಪ್ಪಲಿನ ಕೊಟ್ಟಿಗೆಹಾರದಲ್ಲೂ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ಪಟ್ಟಣದಲ್ಲಿ ಗಾಳಿ-ಮಳೆಯ ಅಬ್ಬರ ಕಂಡು ವಾಹನಗಳು ನಿಂತಲ್ಲೇ ನಿಂತುಹೋಗಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ಮಲೆನಾಡು ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ತೀವ್ರ ಬಿಸಿಲಿನಿಂದ ಬಳಲುತ್ತಿದ್ದ ಜನತೆಗೆ ಮಳೆ ತಂಪು ತಂದಿದ್ದರೂ, ಬಿರುಗಾಳಿಯ ಅಬ್ಬರ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ.
ರಾಜ್ಯದಲ್ಲಿ ಏಪ್ರಿಲ್ 1ರವರೆಗೆ ಆಲಿಕಲ್ಲು ಮಳೆ ಮುನ್ಸೂಚನೆ: ಹವಾಮಾನ ಇಲಾಖೆ ಎಚ್ಚರಿಕೆ
ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ಬಿಸಿಲಿನ ತಾಪ ಹೆಚ್ಚಾಗಿದ್ದರೆ, ಇನ್ನೊಂದೆಡೆ ಅನಿರೀಕ್ಷಿತ ಮಳೆರಾಯನ ಆಗಮನವಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ (Depression) ಪ್ರಭಾವದಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸುರಿಯುತ್ತಿದ್ದು, ಈ ಪರಿಸ್ಥಿತಿ ಏಪ್ರಿಲ್ 1ರವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಆಲಿಕಲ್ಲು ಮಳೆ
ಹವಾಮಾನ ಇಲಾಖೆಯ ವರದಿಯ ತಿಳಿಸಿದಂತೆ, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಏಪ್ರಿಲ್ 1ರವರೆಗೆ ಭಾರಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.
ನ್ನು ಉತ್ತರ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ ಮತ್ತು ವಿಜಯನಗರದಲ್ಲಿ ಮಳೆಯ ಜೊತೆಗೆ ಗುಡುಗು ಮತ್ತು ಮಿಂಚಿನ ಆರ್ಭಟ ಹೆಚ್ಚಿರಲಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಮರದ ಕೆಳಗೆ ಆಶ್ರಯ ಪಡೆಯಬಾರದು ಮತ್ತು ಬಯಲು ಪ್ರದೇಶಗಳಲ್ಲಿ ಸಂಚರಿಸುವಾಗ ಜಾಗರೂಕರಾಗಿರಬೇಕು ಎಂದು ಕುರಿಗಾಹಿಗಳು ಹಾಗೂ ರೈತರಿಗೆ ಇಲಾಖೆ ವಿಶೇಷ ಸಲಹೆ ನೀಡಿದೆ.
ತಾಪಮಾನದ ಏರಿಳಿತ
ಒಂದೆಡೆ ಮಳೆಯ ಮುನ್ಸೂಚನೆ ಇದ್ದರೂ, ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಕಡಿಮೆಯಾಗಿಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಲ್ಲಿ ತಾಪಮಾನ 33°C ನಿಂದ 34°C ವರೆಗೆ ದಾಖಲಾಗುತ್ತಿದೆ. ಉತ್ತರ ಕರ್ನಾಟಕದ ರಾಯಚೂರು, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37°C ತಲುಪಿದ್ದು, ಧಗಧಗಿಸುವ ಬಿಸಿಲು ಮುಂದುವರಿಯಲಿದೆ.
ಪ್ರಮುಖ ನಗರಗಳ ಇಂದಿನ ತಾಪಮಾನ (ಡಿಗ್ರಿ ಸೆಲ್ಸಿಯಸ್‌ನಲ್ಲಿ):
| ನಗರ | ಗರಿಷ್ಠ | ಕನಿಷ್ಠ | ನಗರ | ಗರಿಷ್ಠ | ಕನಿಷ್ಠ |
| ಬೆಂಗಳೂರು | 33 | 22 | ಮೈಸೂರು | 34 | 22 |
| ಮಂಗಳೂರು | 32 | 26 | ಶಿವಮೊಗ್ಗ | 34 | 22 |
| ಬೆಳಗಾವಿ | 33 | 21 | ರಾಯಚೂರು | 37 | 27 |
| ಮಡಿಕೇರಿ | 29 | 19 | ಕಲಬುರಗಿ | 37 | 26 |
| ಹುಬ್ಬಳ್ಳಿ | 34 | 22 | ದಾವಣಗೆರೆ | 34 | 23 |
| ಚಿಕ್ಕಮಗಳೂರು | 29 | 19 | ಉಡುಪಿ | 32 | 25 |
ಸಲಹೆ: ಮಳೆ ಮತ್ತು ಗುಡುಗು ಮಿಂಚಿನ ಮುನ್ಸೂಚನೆ ಇರುವುದರಿಂದ ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಬಿಸಿಲು ಹೆಚ್ಚಿರುವ ಪ್ರದೇಶಗಳಲ್ಲಿ ಜನರು ಹೈಡ್ರೇಟೆಡ್ ಆಗಿರಲು ಹೆಚ್ಚಿನ ನೀರು ಸೇವಿಸುವುದು ಉತ್ತಮ.





