ಚಿಕ್ಕಬಳ್ಳಾಪುರ: ಮಲಗಿದ್ದ ಗಂಡನ ಮರ್ಮಾಂಗಕ್ಕೆ ಪತ್ನಿ ಒದ್ದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದ ನಿವಾಸಿಗಳಾದ ಮುನಿಂದ್ರ ಹಾಗೂ ವರ್ಷಾ ಸುಮಾರು ಒಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಪ್ರಾರಂಭದಲ್ಲಿ ಎಲ್ಲವೂ ಸಹಜವಾಗಿದ್ದರೂ, ಕಳೆದ ಕೆಲವು ತಿಂಗಳಿಂದ ಇವರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿತ್ತು ಎನ್ನಲಾಗಿದೆ. ಸಣ್ಣ ವಿಷಯಕ್ಕೂ ದೊಡ್ಡ ಗಲಾಟೆ ಆಗುತ್ತಿತ್ತು. ಮಹಿಳೆ ಕೆಲವೊಮ್ಮೆ ಅಸಹಜವಾಗಿ ವರ್ತಿಸುತ್ತಿದ್ದಳು ಎಂದು ಹೇಳಲಾಗುತ್ತಿದೆ.
ಯಾವುದೇ ಕಾರಣವಿಲ್ಲದೆ ಗಂಡನೊಂದಿಗೆ ಜಗಳವಾಡುವುದು, ಮನೆಯಲ್ಲೇ ಗಲಾಟೆ ಮಾಡುವುದು, ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು ಎನ್ನಲಾಗಿದೆ. ಇದೇ ರೀತಿ ಘಟನೆ ನಡೆದ ದಿನ ಬೆಳಿಗ್ಗೆಯೂ ಗಂಡ-ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳದ ವೇಳೆ ಮಹಿಳೆ ಗಂಡನ ಬಟ್ಟೆ ಹರಿದು ಹಾಕಿ, ಜೋರಾಗಿ ಗಲಾಟೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಘಟನೆಯ ನಂತರ ರಾತ್ರಿ ಎಲ್ಲವೂ ಶಾಂತವಾಗಿದೆ ಎಂದು ಭಾವಿಸಿದ್ದ ಕುಟುಂಬಸ್ಥರು ಮಲಗಿದ್ದರು. ಆದರೆ ಮಲಗಿದ್ದ ಗಂಡನ ಮೇಲೆ ಪತ್ನಿ ಏಕಾಏಕಿ ದಾಳಿ ನಡೆಸಿ, ಅವನ ಮರ್ಮಾಂಗಕ್ಕೆ ಬಲವಾಗಿ ಹೊಡೆದಿದ್ದಾಳೆ. ತೀವ್ರ ನೋವಿನಿಂದ ನರಳಿದ ಗಂಡ ಕೂಡಲೇ ಎಚ್ಚರಗೊಂಡಿದ್ದಾನೆ. ಈ ಹಲ್ಲೆಯಿಂದ ಗಂಡನಿಗೆ ತೀವ್ರ ನೋವುಂಟಾಗಿದ್ದು, ತಕ್ಷಣ ಆತನೇ ಆಂಬುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅವರು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.
ಗಂಡನನ್ನು ನೋಡಲು ಬೆಳಿಗ್ಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಕುಟುಂಬಸ್ಥರು ಅವಕಾಶ ನೀಡಲಿಲ್ಲ. ಇದರಿಂದ ಮನನೊಂದ ಮಹಿಳೆ ಆಸ್ಪತ್ರೆಯಲ್ಲಿಯೇ ಕ್ರಿಮಿನಾಶಕ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ಚಿಕಿತ್ಸೆಗೆ ಸೇರಿಸಲಾಯಿತು. ಪ್ರಸ್ತುತ ಆಕೆಯೂ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಸ್ಥಿತಿಯೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಂಡನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





