ಬೆಂಗಳೂರು, ಜನವರಿ 24: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾನ್‌ವೆಜ್ ಪ್ರಿಯರಿಗೆ ಭಾರೀ ಶಾಕ್ ಎದುರಾಗಿದೆ. ದಿನನಿತ್ಯದ ಆಹಾರ ಪಟ್ಟಿಯಲ್ಲಿನ ಅತ್ಯಂತ ಜನಪ್ರಿಯವಾಗಿರುವ ಕೋಳಿ ಮಾಂಸದ ಬೆಲೆ ಏಕಾಏಕಿ ಗಗನಕ್ಕೇರಿದ್ದು, ಸಾಮಾನ್ಯ ಗ್ರಾಹಕರ ಬಜೆಟ್‌ಗೆ ಭಾರೀ ಹೊಡೆತ ನೀಡಿದೆ. ಕಳೆದ ಡಿಸೆಂಬರ್‌ನಲ್ಲಿ ಕೆಜಿಗೆ ₹260 ರಿಂದ ₹280ರೊಳಗೆ ದೊರೆಯುತ್ತಿದ್ದ ಕೋಳಿ ಮಾಂಸ, ಇದೀಗ ₹340 ರಿಂದ ₹350 ಗಡಿ ದಾಟಿದೆ. ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ ₹360ಕ್ಕೂ ಹೆಚ್ಚು ದರ ಕೇಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ₹370–₹380ರವರೆಗೂ ಏರಿಕೆಯಾಗುವ ಸಾಧ್ಯತೆ ಇದೆ.
ಬೆಲೆ ಏರಿಕೆಗೆ ಕಾರಣವೇನು?
ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೋಳಿ ಸಾಕಾಣೆದಾರರ ಪ್ರತಿಭಟನೆ. ಕೋಳಿ ಸಾಕಾಣೆಯಲ್ಲಿ ತಗುಲುತ್ತಿರುವ ಹೆಚ್ಚುವರಿ ವೆಚ್ಚಕ್ಕೆ ತಕ್ಕಂತೆ ಕಂಪನಿಗಳು ನ್ಯಾಯಸಮ್ಮತ ದರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಆಹಾರ ಧಾನ್ಯ, ಔಷಧಿ, ಸಾರಿಗೆ, ಕಾರ್ಮಿಕ ವೆಚ್ಚ ಎಲ್ಲವೂ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದರಿಂದ ಕೋಳಿ ಸಾಕಣೆದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಕೋಳಿ ಪೂರೈಕೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಕರ್ನಾಟಕಕ್ಕೆ ತಮಿಳುನಾಡು ಮತ್ತು ಆಂಧ್ರದಿಂದ ಆಗುವ ಸರಬರಾಜು ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಚಿಕನ್ ಕೊರತೆ ಉಂಟಾಗಿ, ದರ ಏರಿಕೆಯಾಗಿದೆ..
ಉತ್ಪಾದನೆ ಕುಸಿತ, ಬೇಡಿಕೆ ಜಾಸ್ತಿ
ಇದೀಗ ಹವಾಮಾನ ಬದಲಾವಣೆ, ಸೋಂಕು ಭೀತಿ, ಮತ್ತು ಸಾಕಾಣೆ ವೆಚ್ಚ ಹೆಚ್ಚಳದ ಕಾರಣದಿಂದ ಕೋಳಿ ಉತ್ಪಾದನೆ ಕೂಡ ಇಳಿಕೆಯಾಗಿದೆ. ಆದರೆ ಪೂರೈಕೆ–ಬೇಡಿಕೆ ಅಸಮತೋಲನ ಉಂಟಾಗಿ ದರ ಏರಿಕೆಯಾಗಿದೆ. ವ್ಯಾಪಾರಿಗಳ ಪ್ರಕಾರ, ಮುಂದಿನ 10–15 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕುರಿ-ಮೇಕೆ ಮಾಂಸಕ್ಕೂ ಬೆಲೆ ಬಿಸಿ
ಕೇವಲ ಕೋಳಿಯಷ್ಟೇ ಅಲ್ಲ, ಕುರಿ ಹಾಗೂ ಮೇಕೆ ಮಾಂಸದ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಕಳೆದ ತಿಂಗಳು ಕೆಜಿಗೆ ₹700–₹750ರೊಳಗೆ ದೊರೆಯುತ್ತಿದ್ದ ಕುರಿ–ಮೇಕೆ ಮಾಂಸ ಇದೀಗ ನೇರವಾಗಿ ₹900 ಗಡಿ ದಾಟಿದೆ. ಕೆಲ ಪ್ರದೇಶಗಳಲ್ಲಿ ₹950ರವರೆಗೂ ಕೇಳಲಾಗುತ್ತಿದೆ.
ಇದಕ್ಕೆ ಮುಖ್ಯ ಕಾರಣ ಪೂರೈಕೆ ಕುಸಿತ ಹಾಗೂ ಸಾಗಣೆ ವೆಚ್ಚ ಏರಿಕೆಯಾಗಿದೆ. ಇದರಿಂದ ನಾನ್‌ವೆಜ್ ಪ್ರಿಯರಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ.
ಹೋಟೆಲ್‌ಗಳ ಮೆನು ಮೇಲೂ ಪರಿಣಾಮ
ಮಾಂಸದ ದರ ಏರಿಕೆಯ ಪರಿಣಾಮ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮೇಲೂ ನೇರವಾಗಿ ಬೀರುತ್ತಿದೆ. ಚಿಕನ್ ಬಿರಿಯಾನಿ, ಚಿಕನ್ ಕಬಾಬ್, ಚಿಕನ್ ಕರೀ, ಮಟನ್ ಬಿರಿಯಾನಿ ಸೇರಿದಂತೆ ಜನಪ್ರಿಯ ನಾನ್‌ವೆಜ್ ಖಾದ್ಯಗಳ ದರವನ್ನು 10 ರಿಂದ 20 ಶೇಕಡಾ ಹೆಚ್ಚಿಸುವ ಬಗ್ಗೆ ಹಲವಾರು ಹೋಟೆಲ್ ಮಾಲೀಕರು ಚಿಂತನೆ ನಡೆಸುತ್ತಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ಈಗಾಗಲೇ ದರ ಏರಿಕೆ ಜಾರಿಯಾಗಿದೆ.





