ಬೆಂಗಳೂರು, ಜನವರಿ 02, 2026: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರು ಬುಧವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮತ್ತು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಿಸಿಬಿ ಮೂರು ವಿಶೇಷ ತಂಡಗಳನ್ನು ರಚಿಸಿತ್ತು. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸದ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಭಯಭೀತರಾದ ಹಲವು ಕಿಡಿಗೇಡಿಗಳು ತಮ್ಮ ಅಕೌಂಟ್‌ಗಳನ್ನು ಡಿಲೀಟ್ ಮಾಡಿದ್ದು, ಇನ್ನು ಕೆಲವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಆದರೂ, ವಿಜಯಲಕ್ಷ್ಮಿ ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿ ಹಂಚಲಾಗಿದ್ದ ಸುಮಾರು 150ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿಂದೆ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ಸುದೀರ್ಘ ‘ಫ್ಯಾನ್ಸ್ ವಾರ್’ ಇದೆ. ಇತ್ತೀಚೆಗೆ ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ಸುದೀಪ್, ನಾವು ಯುದ್ಧಕ್ಕೆ ಸಿದ್ಧವಾಗಿದ್ದೇವೆ, ಡಿಸೆಂಬರ್ 25ರಂದು ಜೋರಾಗಿ ಬಾಗಿಲು ತಟ್ಟುತ್ತಿದ್ದೇವೆ ಎಂದು ಹೇಳಿದ್ದರು. ಸುದೀಪ್ ಅವರ ಈ ಮಾತುಗಳು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಪರಿಣಾಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ನಿಂದನೆಗಳು ಆರಂಭವಾದವು.
ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾದ ಈ ಜಗಳ ಕೇವಲ ನಟರಿಗೆ ಸೀಮಿತವಾಗದೆ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ವರೆಗೂ ತಲುಪಿತು. ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆ ಕಮೆಂಟ್‌ಗಳು ಬರಲು ಆರಂಭವಾಯಿತು. ಈ ಕುರಿತು ಪ್ರತಿಕ್ರಿಯಿಸಿದ್ದ ವಿಜಯಲಕ್ಷ್ಮಿ, ಟೀಕಿಸುವವರ ಬಗ್ಗೆ ದರ್ಶನ್ ತಲೆಕೆಡಿಸಿಕೊಳ್ಳುವುದಿಲ್ಲ, ನೀವು ಕೂಡ ಸಂಯಮದಿಂದ ಇರಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಆದರೆ ಕಿಡಿಗೇಡಿಗಳ ವರ್ತನೆ ಹದ್ದುಮೀರಿದ ಕಾರಣ ವಿಜಯಲಕ್ಷ್ಮಿ ದರ್ಶನ್ ಕಾನೂನಿನ ಮೊರೆ ಹೋಗಬೇಕಾಯಿತು.
ಸದ್ಯ ಪೊಲೀಸರು ಇನ್ನುಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸೆಲೆಬ್ರಿಟಿಗಳ ಕುಟುಂಬದ ಮಹಿಳೆಯರನ್ನು ಅವಹೇಳನ ಮಾಡುವುದು ಗಂಭೀರ ಅಪರಾಧವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





