ಬೆಂಗಳೂರು, ಮೇ 27: ಬಣ್ಣ ಬಣ್ಣದ ಕೇಕ್, ಪಫ್ಸ್, ಚಿಪ್ಸ್, ಸಿಹಿತಿಂಡಿಗಳನ್ನು ಆಸೆಯಿಂದ ಖರೀದಿಸಿ ತಿನ್ನುವ ಜನರಿಗೆ ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವರದಿ ಭಾರೀ ಆತಂಕ ಹುಟ್ಟಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಾರಾಟವಾಗುತ್ತಿರುವ ಬೇಕರಿ ತಿನಿಸುಗಳು ಹಾಗೂ ಚಿಪ್ಸ್‌ಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿ ಹಾಗೂ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತಿದೆ ಎಂಬ ಆಘಾತಕಾರಿ ಸತ್ಯ ಲ್ಯಾಬ್ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ರಾಜ್ಯಾದ್ಯಂತ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಒಟ್ಟು 35,639 ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಮಾದರಿಗಳ ಪರೀಕ್ಷಾ ವರದಿ ಇದೀಗ ಹೊರಬಿದ್ದಿದ್ದು, ಬಹುತೇಕ ಬೇಕರಿ ಉತ್ಪನ್ನಗಳು ಹಾಗೂ ಚಿಪ್ಸ್‌ಗಳಲ್ಲಿ ನಿಷೇಧಿತ ಮತ್ತು ಮಿತಿಮೀರಿದ ರಾಸಾಯನಿಕ ಬಣ್ಣಗಳ ಬಳಕೆ ಕಂಡುಬಂದಿದೆ ಎಂದು ಇಲಾಖೆ ತಿಳಿಸಿದೆ.
ಗ್ರಾಹಕರನ್ನು ಆಕರ್ಷಿಸಲು ಕೆಲವು ತಯಾರಕರು ಕೃತಕ ಬಣ್ಣಗಳನ್ನು ಅತಿಯಾಗಿ ಬಳಸುತ್ತಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಈ ಬಣ್ಣಗಳು ದೇಹಕ್ಕೆ ನಿಧಾನವಾಗಿ ವಿಷದಂತೆ ಕೆಲಸ ಮಾಡುತ್ತವೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಆಹಾರ ತಜ್ಞರ ಪ್ರಕಾರ, ನಿಯಮಬಾಹಿರ ರಾಸಾಯನಿಕ ಬಣ್ಣಗಳ ನಿರಂತರ ಸೇವನೆಯಿಂದ ಕ್ಯಾನ್ಸರ್, ಲಿವರ್ ಸಮಸ್ಯೆ, ಅಲರ್ಜಿ, ಹೊಟ್ಟೆ ಸಂಬಂಧಿತ ಕಾಯಿಲೆಗಳು ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಗಂಭೀರ ಕಾಯಿಲೆಗಳು ಹೆಚ್ಚುತ್ತಿರುವುದಕ್ಕೂ ಇಂತಹ ಕಲಬೆರಕೆ ಆಹಾರಗಳು ಒಂದು ಪ್ರಮುಖ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆಹಾರ ಸುರಕ್ಷತಾ ಇಲಾಖೆಯ ಈ ವರದಿ ಹೊರಬಿದ್ದ ತಕ್ಷಣವೇ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜನರ ಆರೋಗ್ಯದ ಜೊತೆ ಆಟವಾಡುತ್ತಿರುವ ಬೇಜವಾಬ್ದಾರಿ ಬೇಕರಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಿಯಮ ಉಲ್ಲಂಘಿಸಿ ವಿಷಕಾರಿ ಪದಾರ್ಥಗಳನ್ನು ಬಳಸುತ್ತಿರುವ ಅಂಗಡಿಗಳನ್ನು ತಕ್ಷಣವೇ ಸೀಲ್ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.
ಇನ್ನು, ಆಹಾರ ಸುರಕ್ಷತಾ ಇಲಾಖೆ ಕೂಡ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮತ್ತಷ್ಟು ಕಟ್ಟುನಿಟ್ಟಿನ ತಪಾಸಣೆ ನಡೆಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಆಹಾರ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





