ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬೈರತಿ ಬಸವರಾಜ್ ಗೆ 7 ದಿನಗಳ ಪೊಲೀಸ್ ಕಸ್ಟಡಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಶನಿವಾರದವರೆಗೆ (ಫೆಬ್ರವರಿ 21ರವರೆಗೆ) ಬೈರತಿ ಬಸವರಾಜ್ ಪೊಲೀಸ್ ಕಸ್ಟಡಿಯಲ್ಲಿರಲಿದ್ದು, ಈ ಅವಧಿಯಲ್ಲಿ ಸಿಐಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಬೈರತಿ ಬಸವರಾಜ್‌ಗೆ ಹೃದಯ ಸಮಸ್ಯೆ ಇದೆ ಎಂದು ಹಿಂದೆ ಹೇಳಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ನಡೆಸಿದ ಪರೀಕ್ಷೆಯಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ವರದಿ ಬಂದಿದೆ. ಇದರ ನಂತರ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿ ಕೇಳಿದ್ದು, ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಪ್ರಮುಖ ಆರೋಪಿಯಾಗಿ (A5) ಗುರುತಿಸಲ್ಪಟ್ಟಿದ್ದಾರೆ. ಪ್ರಕರಣದ ತನಿಖೆಯಲ್ಲಿ ಹಲವು ಮುಖ್ಯ ಸಾಕ್ಷ್ಯಗಳು ಮತ್ತು ಮಾಹಿತಿಗಳನ್ನು ಪಡೆಯಲು ಪೊಲೀಸರು ಕಸ್ಟಡಿ ಮೊರೆ ಹೋಗಿದ್ದರು. ಸಿಐಡಿ ತಂಡ ಈಗ ತೀವ್ರ ತನಿಖೆಯಲ್ಲಿ ತೊಡಗಿದ್ದು, ಕಸ್ಟಡಿ ಅವಧಿಯಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನ್ಯಾಯಾಲಯದ ಆದೇಶದ ನಂತರ ಬೈರತಿ ಬಸವರಾಜ್ ಅವರನ್ನು ಸಿಐಡಿ ಕಚೇರಿಗೆ ಕರೆತರಲಾಗಿದ್ದು, ವಿಚಾರಣೆ ಆರಂಭವಾಗಿದೆ.





