ಗದಗ: ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುತ್ತಿದ್ದ ವೇಳೆ ತಂಬಿಗೆಯೊಂದರಲ್ಲಿ ಸುಮಾರು ಒಂದು ಕೆ.ಜಿ ತೂಕದ ಚಿನ್ನಾಭರಣಗಳು ಮತ್ತು ಬಂಗಾರದ ಒಡವೆಗಳಿರುವ ನಿಧಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ..
ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಎಂಬುವರಿಗೆ ಸೇರಿದ ಜಾಗದಲ್ಲಿ ಈ ನಿಧಿ ಪತ್ತೆಯಾಗಿದೆ. ತಮ್ಮ ಮನೆ ಕಟ್ಟಲೆಂದು ಕಾರ್ಮಿಕರ ಮೂಲಕ ಅಡಿಪಾಯ ತೆಗೆಯುವ ಕಾರ್ಯ ನಡೆಯುತ್ತಿದ್ದಾಗ, ಮಣ್ಣಿನೊಳಗೆ ಹೂತುಹಾಕಲಾಗಿದ್ದ ತಂಬಿಗೆಯೊಂದು ಪತ್ತೆಯಾಗಿದೆ. ತಂಬಿಗೆಯನ್ನು ತೆರೆದಾಗ ಅದರೊಳಗೆ ಚಿನ್ನದ ಗಟ್ಟಿ, ಬಂಗಾರದ ಸರ, ಬಳೆಗಳು ಸೇರಿದಂತೆ ಹಲವು ಅಮೂಲ್ಯ ಚಿನ್ನಾಭರಣಗಳು ಇರುವುದು ಕಂಡುಬಂದಿದೆ. ಈ ಚಿನ್ನದ ಒಟ್ಟು ತೂಕ ಸುಮಾರು ಒಂದು ಕೆ.ಜಿ ಇರಬಹುದು ಎನ್ನಲಾಗಿದೆ.
ನಿಧಿ ಸಿಕ್ಕ ಕೂಡಲೇ ಮನೆಯವರು ಅದನ್ನು ಗ್ರಾಮದ ಗಣೇಶ ದೇಗುಲದಲ್ಲಿ ಸುರಕ್ಷಿತವಾಗಿ ಇಟ್ಟಿದ್ದಾರೆ. ಈ ಕುರಿತು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರಕುತ್ತಿದ್ದಂತೆ ಲಕ್ಕುಂಡಿಗೆ ತಹಶಿಲ್ದಾರ್, ಪೊಲೀಸ್ ಅಧಿಕಾರಿಗಳು ಮತ್ತು ಪುರಾತತ್ವ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ.
ನಿಧಿ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿದ ಅಧಿಕಾರಿಗಳು, ಸ್ಥಳದಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಚಿನ್ನದ ನಿಧಿಯನ್ನು ಇಡಲಾಗಿರುವ ಗಣೇಶ ದೇಗುಲದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಗುಂಪುಗೂಡದಂತೆ ಹಾಗೂ ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ನಿಧಿ ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ, ಲಕ್ಕುಂಡಿ ಗ್ರಾಮಕ್ಕೆ ಹಾಗೂ ನಿಧಿ ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿದ್ದಾರೆ. ಕೆಲವರು ಇದನ್ನು ದೇವರ ಅನುಗ್ರಹವೆಂದು ನಂಬಿದ್ದರೆ, ಇನ್ನೂ ಕೆಲವರು ಇತಿಹಾಸದ ಅಮೂಲ್ಯ ಸಾಕ್ಷಿಯೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನಸಂದಣಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಗಾ ವಹಿಸಿದ್ದಾರೆ.





