ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಸೀಜನ್-12 ಕಾರ್ಯಕ್ರಮವು ಮತ್ತೊಮ್ಮೆ ವಿವಾದದ ಸಿಲುಕಿದೆ. ಪರಿಸರ ನಿಯಮ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದರು. ಇದರಿಂದ ಬಿಗ್ ಬಾಸ್ ಹೌಸ್ ಮತ್ತು ಶೋ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಮತ್ತು ಜಾಲಿವುಡ್ ಸ್ಟುಡಿಯೋ ಆಡಳಿತ ಮಂಡಳಿಯು ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಭರವಸೆ ನೀಡಿದ ನಂತರ, ಸ್ಟುಡಿಯೋದ ಬೀಗವನ್ನು ತೆಗೆಯಲಾಗಿದೆ. ಇದರಿಂದಾಗಿ ಇಂದಿನಿಂದ ಬಿಗ್ ಬಾಸ್ ಕಾರ್ಯಕ್ರಮದ ಶೂಟಿಂಗ್ ಪುನರಾರಂಭವಾಗಿದೆ.
ಈ ಬೆಳವಣಿಗೆಯು ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಮನಗರದ ಜಾಲಿವುಡ್ ಸ್ಟುಡಿಯೋ ಗೇಟ್ ಬಳಿ ಜಮಾಯಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸರ್ಕಾರದ ಈ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. “ರಾತ್ರೋರಾತ್ರಿ ಯಾವ ಆಧಾರದ ಮೇಲೆ ಬಿಗ್ ಬಾಸ್‌ಗೆ ಅನುಮತಿ ನೀಡಲಾಗಿದೆ?” ಎಂದು ಅವರು ಪ್ರಶ್ನಿಸಿದ್ದಾರೆ. ಸ್ಟುಡಿಯೋ ಆಡಳಿತವು ಪರಿಸರ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪವಿದೆ, ಈ ಅನುಮತಿಯನ್ನು ಅಕ್ರಮವೆಂದು ಕರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋ ಗೇಟ್ ತೆರೆಯುತ್ತಿದ್ದಂತೆ ಬಿಗ್ ಬಾಸ್ ಮನೆಯನ್ನೂ ಮತ್ತೆ ತೆರೆಯಲಾಗಿದೆ. ಸ್ಪರ್ಧಿಗಳು ಒಳಗೆ ಆಗಮಿಸಿ, ಶೂಟಿಂಗ್‌ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. “ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ಈ ಶೋ ನಡೆಯುತ್ತಿದೆ. ಸರ್ಕಾರ ಈ ರೀತಿಯ ಕಾರ್ಯಕ್ರಮಗಳಿಗೆ ಒತ್ತಡಕ್ಕೆ ಮಣಿದು ಅನುಮತಿ ನೀಡಿರುವುದು ಸರಿಯಲ್ಲ” ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಮುಖಂಡರು ಆರೋಪಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋದ ಆಡಳಿತ ಮಂಡಳಿಯು ತಾವು ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸುವುದಾಗಿ ಭರವಸೆ ನೀಡಿದೆ. “ನಾವು ಪರಿಸರ ಸಂರಕ್ಷಣೆಗೆ ಬದ್ಧರಾಗಿದ್ದೇವೆ. ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದು ಸ್ಟುಡಿಯೋದ ವಕ್ತಾರರು ತಿಳಿಸಿದ್ದಾರೆ. ಆದರೆ, ಕನ್ನಡಪರ ಸಂಘಟನೆಗಳು ಈ ಭರವಸೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. “ಸರ್ಕಾರವು ಕನ್ನಡಿಗರ ಧ್ವನಿಯನ್ನು ಕಡೆಗಣಿಸಿದೆ. ಈ ಶೋಗೆ ಅನುಮತಿ ನೀಡಿರುವುದು ಕೇವಲ ರಾಜಕೀಯ ಒತ್ತಡದಿಂದ ಎಂಬುದು ಸ್ಪಷ್ಟವಾಗಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.