ಬೆಂಗಳೂರು, ಅಕ್ಟೋಬರ್ 08, 2025: ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮದ ಸ್ಟುಡಿಯೋವನ್ನು ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘನೆ ಆರೋಪದ ಮೇಲೆ ಸರ್ಕಾರ ಮುಚ್ಚಿತ್ತು. ಆದರೆ, ಈಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ, ಕಾರ್ಯಕ್ರಮದ ಪುನಾರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಜಾಲಿವುಡ್ ಸ್ಟುಡಿಯೋಸ್‌ಗೆ ಒಂದು ಬಾರಿ ಅನುಮತಿ ನೀಡುವಂತೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. “ತಪ್ಪು ಸರಿಪಡಿಸಿಕೊಳ್ಳಲು ಒಂದು ಅವಕಾಶ ಕೊಡಿ. ಉದ್ಯೋಗ ಮುಖ್ಯ, ಮನರಂಜನೆಯೂ ಮುಖ್ಯ. ಖಾಸಗಿಯವರು ಹೂಡಿಕೆ ಮಾಡಿದ್ದಾರೆ, ಅವರಿಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ನೀಡಬೇಕು,” ಎಂದು ಹೇಳಿದರು.
ಜಾಲಿವುಡ್ ಸ್ಟುಡಿಯೋದವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ನಿಯಮಗಳನ್ನು ಪಾಲಿಸದ ಕಾರಣಕ್ಕೆ ನೋಟಿಸ್ ಪಡೆದಿದ್ದರು. ಈ ಕುರಿತು ಶಿವಕುಮಾರ್, “ಕೆಲವರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾನೇ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಫೋನ್ ಮಾಡಿ, ಕಾನೂನಾತ್ಮಕ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಸೂಚಿಸಿದ್ದೇನೆ,” ಎಂದರು.
“ಬಿಗ್ ಬಾಸ್ ಆಗಲಿ, ಯಾವುದೇ ಕಾರ್ಯಕ್ರಮವಾಗಲಿ, ಮನರಂಜನೆ ಜನರಿಗೆ ಬೇಕು. ಖಾಸಗಿಯವರು ಹೂಡಿಕೆ ಮಾಡಿ ತಪ್ಪು ಮಾಡಿರಬಹುದು, ಆದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು,” ಎಂದು ಡಿಕೆ ಶಿವಕುಮಾರ್ ಅವರು ತಮ್ಮ ಸಲಹೆಯನ್ನು ನೀಡಿದರು. ಜಾಲಿವುಡ್ ಸ್ಟುಡಿಯೋ ಉದ್ಘಾಟನೆಯನ್ನು ತಾವೇ ಮಾಡಿದ್ದಾಗಿ ನೆನಪಿಸಿದ ಅವರು, “ಅಲ್ಲಿ ಏನಾಗಿದೆ ಎಂಬುದರ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಉದ್ಯೋಗ ಸೃಷ್ಟಿಯೂ ಮುಖ್ಯ. ಆದ್ದರಿಂದ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕೊಡಿ ಎಂದು ಸೂಚಿಸಿದ್ದೇನೆ,” ಎಂದರು.
ಜೆಡಿಎಸ್‌ಗೆ ಡಿಕೆಎಸ್‌ನಿಂದ ತಿರುಗೇಟು
ಜೆಡಿಎಸ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಷಯದ ಬಗ್ಗೆ ಎಕ್ಸ್‌ನಲ್ಲಿ “ನಟ್ಟು ಬೋಲ್ಟ್ ಟೈಟ್” ಎಂದು ವ್ಯಂಗ್ಯವಾಡಿರುವ ಬಗ್ಗೆ ಕೇಳಿದಾಗ, ಶಿವಕುಮಾರ್ ತಿರುಗೇಟು ನೀಡಿದರು. “ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿಯವರಾದರೂ ಆಗಲಿ, ಯಾರನ್ನಾದರೂ ಕರೆದುಕೊಂಡಾದರೂ ಆಗಲಿ, ಮಾಡಿಕೊಳ್ಳಲಿ,” ಎಂದು ವ್ಯಂಗ್ಯವಾಡಿದರು. “ಜೆಡಿಎಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ನನ್ನ ಹೆಸರನ್ನು ಪ್ರತಿದಿನ ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ, ನೆಮ್ಮದಿ, ಶಕ್ತಿ ಏನೂ ಬರುವುದಿಲ್ಲ,” ಎಂದು ಲೇವಡಿ ಮಾಡಿದರು.