ಬೀದರ್: ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿ ಕೆಮಿಕಲ್ ಫ್ಯಾಕ್ಟರಿಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗಳಿಂದ ಸ್ಥಳೀಯರು ಕಂಗಾಲಾಗಿದ್ದಾರೆ. ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ವಿರುದ್ಧ ಸ್ಥಳೀಯರು ಮತ್ತು ಬಿಗ್ ಬಾಸ್ ಅಭಿಮಾನಿಯೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಮ್ಮ ಕರ್ತವ್ಯ ನಿಷ್ಠೆಯನ್ನು ಬೀದರ್‌ನಲ್ಲಿ ತೋರಿಸಿ, ಸಚಿವರೇ!” ಎಂದು ಭೀಮರೆಡ್ಡಿ ಎಂಬುವರು ಕಿಡಿಕಾರಿದ್ದಾರೆ.
ಕೆಮಿಕಲ್ ಫ್ಯಾಕ್ಟರಿಗಳಿಂದ ಬಿಡುಗಡೆಯಾಗುವ ವಿಷಕಾರಕ ಅನಿಲಗಳಿಂದ ಚರ್ಮ ರೋಗಗಳು, ಉಸಿರಾಟದ ತೊಂದರೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿವೆ. ಇದರಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿಯಮಗಳನ್ನು ಉಲ್ಲಂಘಿಸಿ ನೂರಾರು ಕೆಮಿಕಲ್ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪವಿದೆ.
“ವಾಯುಮಾಲಿನ್ಯಕ್ಕೆ ಬಿಗ್ ಬಾಸ್ ಕಾರಣವಲ್ಲ, ವಿಷ ಬಿಡುವ ಕೆಮಿಕಲ್ ಫ್ಯಾಕ್ಟರಿಗಳೇ ಕಾರಣ!” ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಹಲವರು ಹೋರಾಟ ನಡೆಸುತ್ತಿದ್ದರೂ, ಸಚಿವರು ಯಾವುದೇ ಕಠಿಣ ಕ್ರಮಕೈಗೊಳ್ಳದಿರುವುದಕ್ಕೆ ಜನರು ಅಸಮಾಧಾನಗೊಂಡಿದ್ದಾರೆ. “ಹುಮ್ನಾಬಾದ್ ಜನರ ಜೀವಕ್ಕೆ ಬೆಲೆ ಇಲ್ವಾ?” ಎಂದು ಪ್ರಶ್ನಿಸಿರುವ ಸ್ಥಳೀಯರು, ಕೆಮಿಕಲ್ ಫ್ಯಾಕ್ಟರಿಗಳ ಹಾವಳಿಯಿಂದ ಬೇಸತ್ತು ಕೆಲವರು ಊರನ್ನೇ ಬಿಟ್ಟು ಹೋಗುವಂತಹ ದುಸ್ಥಿತಿ ಎದುರಾಗಿದೆ.
“ನಿಮ್ಮದೇ ಜಿಲ್ಲೆಯಲ್ಲಿ ಇಷ್ಟೊಂದು ವಾಯುಮಾಲಿನ್ಯವಾಗುತ್ತಿದ್ದರೂ ಕ್ರಮಕೈಗೊಳ್ಳದಿರುವುದು ಯಾಕೆ?” ಎಂದು ಜನರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಮಿಕಲ್ ಫ್ಯಾಕ್ಟರಿಗಳನ್ನು ಬಂದ್ ಮಾಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ.