ಬಿಡದಿ ಟೌನ್‌ಶಿಪ್ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ ತೀವ್ರಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಇಂದಿನಿಂದ 3 ದಿನಗಳ ಕಾಲ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ದಳಪತಿಗಳು ಸಜ್ಜಾಗಿದ್ದಾರೆ.
ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನವೇ ಜೆಡಿಎಸ್ ಹೋರಾಟಕ್ಕೆ ಇಳಿದಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸುಮಾರು 9,600 ಎಕರೆ ಫಲವತ್ತಾದ ಭೂಮಿಯನ್ನು ರಕ್ಷಿಸುವುದು ತಮ್ಮ ಹೋರಾಟದ ಪ್ರಮುಖ ಉದ್ದೇಶ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ಬೈರಮಂಗಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ.
ಮೊದಲ ದಿನದ ಪಾದಯಾತ್ರೆ ಮಾರ್ಗ
ಆಗಸ್ಟ್ 9ರಂದು ಬೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ತಿಮ್ಮೇಗೌಡನದೊಡ್ಡಿ, ವೃಷಭಾವತಿಪುರ, ಅಬ್ಬನಕುಪ್ಪೆ, ಜೋಗರದೊಡ್ಡಿ ಮಾರ್ಗವಾಗಿ ಸಾಗಲಿದೆ. ಜೋಗರದೊಡ್ಡಿಯಲ್ಲಿ ಮಧ್ಯಾಹ್ನದ ಊಟ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.
ಬಳಿಕ ಮೇಡನಹಳ್ಳಿ, ಬೈರಮಂಗಲ ಕ್ರಾಸ್ (ರಂಗೇಗೌಡನದೊಡ್ಡಿ), ಬಿಜಿಎಸ್ ವೃತ್ತದ ಮೂಲಕ ಪಾದಯಾತ್ರೆ ಬಿಡದಿಗೆ ತಲುಪಲಿದೆ. ಮೊದಲ ದಿನದ ಪಾದಯಾತ್ರೆಯ ಬಳಿಕ ಬಿಡದಿಯ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಆಗಸ್ಟ್ 10ರಂದು ಎರಡನೇ ದಿನದ ಪಾದಯಾತ್ರೆ
ಎರಡನೇ ದಿನ ಬಿಡದಿಯ ಬಿಜಿಎಸ್ ವೃತ್ತದಿಂದ ಪಾದಯಾತ್ರೆ ಪುನರಾರಂಭವಾಗಲಿದೆ. ಅಲ್ಲಿಂದ ಬೈರಮಂಗಲ ಕ್ರಾಸ್, ಬಿಲ್ಲಕೆಂಪನಹಳ್ಳಿ ಗೇಟ್, ಬಂಗ್ಲೆ (ಈಗಲ್ಟನ್ ಕ್ರಾಸ್), ಲಕ್ಷ್ಮೀಸಾಗರ, ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಮಂಚನಾಯಕನಹಳ್ಳಿ (ವಂಡರ್ಲಾ ಗೇಟ್) ಮಾರ್ಗವಾಗಿ ಪಾದಯಾತ್ರೆ ಸಾಗಲಿದೆ.
ಬಳಿಕ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿ ನಡೆಯಲಿದೆ. ನಂತರ ಎಸ್‌ವಿಟಿ ಕಾಲೋನಿ (ಹೆಜ್ಜಾಲ), ಕಣಿಮಿಣಿಕೆ ಟೋಲ್ ಪ್ಲಾಜಾ, ಎಂ. ಸಿರಿ ಕನ್ವೆನ್ಸನ್ ಹಾಲ್ ಮೂಲಕ ಪಾದಯಾತ್ರೆ ಮುಂದುವರಿಯಲಿದೆ. ಎಂ. ಸಿರಿ ಕನ್ವೆನ್ಸನ್ ಹಾಲ್‌ನಲ್ಲಿ ಚಹಾ ವಿರಾಮದ ಬಳಿಕ ಕುಂಬಳಗೂಡು, ದೊಡ್ಡ ಆಲದಮರ ಕ್ರಾಸ್ (ರಾಮೋಹಳ್ಳಿ), ಅಂಚೆಪಾಳ್ಯ ಹಾಗೂ ಚಲ್ಲಘಟ್ಟ ಮಾರ್ಗವಾಗಿ ಸಾಗಲಿದೆ.
ಅಂತಿಮವಾಗಿ ಮೈಸೂರು ರಸ್ತೆಯ ನೈಸ್ ಜಂಕ್ಷನ್‌ನಲ್ಲಿ ಎರಡು ದಿನಗಳ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಸರ್ಕಾರದ ಯೋಜನೆ ಹಾಗೂ ಭೂಸ್ವಾಧೀನ ಪ್ರಸ್ತಾವನೆ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ರೈತರ ಪರವಾಗಿ ಧ್ವನಿ ಎತ್ತುವುದು ಮತ್ತು ಸರ್ಕಾರದ ಗಮನ ಸೆಳೆಯುವುದು ಜೆಡಿಎಸ್‌ನ ಪ್ರಮುಖ ಉದ್ದೇಶವಾಗಿದೆ. ಈ ಪಾದಯಾತ್ರೆ ಮೂಲಕ ಅಧಿವೇಶನಕ್ಕೂ ಮುನ್ನ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಮತ್ತಷ್ಟು ರಾಜಕೀಯ ಒತ್ತಡ ಸೃಷ್ಟಿಸುವ ಸಾಧ್ಯತೆ ಇದೆ.





