ಶಿವಮೊಗ್ಗ, ನವೆಂಬರ್ 26: ಮದುವೆಯಾದ ಆರು ತಿಂಗಳಲ್ಲೇ ಗಂಡನ ಮನೆಯ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆ ಹಂಚಿನ ಸಿದ್ದಾಪುರ ಗ್ರಾಮದ ಲತಾ (೨೫) ಎಂದು ಗುರುತಿಸಲಾಗಿದೆ.
ಲತಾ ಬಿಎಸ್‌ಸಿ ಹಾಗೂ ಬಿಎಡ್ ಪದವೀಧರೆ. ಇವರು ಈ ವರ್ಷ ಏಪ್ರಿಲ್ 14ರಂದು ಶಿಕಾರಿಪುರದ ಗುರುರಾಜ್ ಎಂಬ ಯುವಕನನ್ನು ವಿವಾಹವಾದರು. ಗುರುರಾಜ್ ಕೆಪಿಸಿಎಲ್‌ನಲ್ಲಿ ಸಹಾಯಕ ಎಂಜಿನಿಯರ್ (ಎಇಇ) ಆಗಿ ಕೆಲಸ ಮಾಡುತ್ತಿದ್ದಾರೆ.
ನವೆಂಬರ್ 23ರ ಸಂಜೆ ಲತಾ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಒಂದು ಸಂದೇಶವನ್ನು ಹಾಕಿದ್ದರು. ಅದು ಆಕೆಯ ಡೆತ್‌ನೋಟ್ ಆಗಿತ್ತು. “ನನ್ನ ಗಂಡ ಮತ್ತು ಅತ್ತೆ-ಮಾವಂದಿರು ನನ್ನನ್ನು ನಿರಂತರವಾಗಿ ಕಿರುಕುಳ ಮಾಡುತ್ತಿದ್ದಾರೆ. ಮಾನಸಿಕವಾಗಿ ನನ್ನನ್ನು ಒತ್ತಡಕ್ಕೆ ಒಳಪಡಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಬರೆದಿದ್ದರು. ಈ ಸಂದೇಶ ಓದಿದ ಕೆಲವೇ ಕ್ಷಣಗಳಲ್ಲಿ ಲತಾ ಭದ್ರಾ ನಾಲೆಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ಬೆನ್ನಲ್ಲೇ ಲತಾ ಅವರ ಪತಿ ಗುರುರಾಜ್ ಹಾಗೂ ಆತನ ಕುಟುಂಬದ ಸದಸ್ಯರು ಮನೆಯಿಂದ ನಾಪತ್ತೆಯಾಗಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪತಿ ಗುರುರಾಜ್, ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಘಟನೆಯ ನಂತರ ಅಗ್ನಿಶಾಮಕ ದಳ ಮತ್ತು ಪೊಲೀಸರು ಭದ್ರಾ ನಾಲೆಯಲ್ಲಿ ಲತಾ ಅವರ ಶವವನ್ನು ಹುಡುಕುವ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಇನ್ನೂ ಶವ ಪತ್ತೆಯಾಗಿಲ್ಲ.
800 ಗ್ರಾಂ ಚಿನ್ನ, ವೋಲ್ವೋ ಕಾರು ಕೊಟ್ಟರೂ ಸಾಕಾಗಲಿಲ್ಲ: ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ!
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ 27 ವರ್ಷದ ನವವಿವಾಹಿತೆ ರಿಧಾನ್ಯಾ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ. ರಿಧಾನ್ಯಾ ಕಾರಿನಲ್ಲಿ ಕ್ರಿಮಿನಾಶಕ ಸೇವಿಸಿ ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯು ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಮತ್ತೊಮ್ಮೆ ಆಕ್ರೋಶವನ್ನು ಹುಟ್ಟುಹಾಕಿದೆ.
ರಿಧಾನ್ಯಾ ಈ ವರ್ಷದ ಏಪ್ರಿಲ್‌ನಲ್ಲಿ ಕವಿನ್ ಕುಮಾರ್ ಜೊತೆ ವಿವಾಹವಾಗಿದ್ದರು. ಮದುವೆಯ ವೇಳೆ ರಿಧಾನ್ಯಾ ತಂದೆ ಅಣ್ಣಾದೊರೈ 70 ಲಕ್ಷ ರೂಪಾಯಿ ಮೌಲ್ಯದ ವೋಲ್ವೋ ಕಾರು ಮತ್ತು 800 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಕವಿನ್ ಕುಮಾರ್ ಕುಟುಂಬಕ್ಕೆ ನೀಡಿದ್ದರು. ಆದರೂ, ಗಂಡನ ಮನೆಯವರು ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ರಿಧಾನ್ಯಾರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಕಾರಿನಲ್ಲಿ ಮನೆಯಿಂದ ಹೊರಟ ರಿಧಾನ್ಯಾ, ಮಂಡಿಪಾಳ್ಯ ಬಳಿಯ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಕ್ರಿಮಿನಾಬಾಶಕ ಸೇವಿಸಿದ್ದಾರೆ. ಸ್ಥಳೀಯರು ಕಾರು ದೀರ್ಘಕಾಲ ನಿಂತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ರಿಧಾನ್ಯಾರ ದೇಹವನ್ನು ಪರಿಶೀಲಿಸಿದಾಗ, ಆಕೆ ಕ್ರಿಮಿನಾಶಕ ಸೇವಿಸಿರುವುದು ದೃಢಪಟ್ಟಿದೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಜೀವ ಕಳೆದುಕೊಳ್ಳುವ ಮೊದಲು, ರಿಧಾನ್ಯಾ ತಮ್ಮ ತಂದೆ ಅಣ್ಣಾದೊರೈಗೆ ಎಂಟು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿದ್ದರು. ಈ ಸಂದೇಶಗಳಲ್ಲಿ ಗಂಡ ಕವಿನ್ ಕುಮಾರ್, ಅತ್ತೆ ಚಿತ್ರಾದೇವಿ, ಮತ್ತು ಮಾವ ಈಶ್ವರ ಮೂರ್ತಿಯಿಂದ ತಾನು ಎದುರಿಸುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. “ಗಂಡನ ಮನೆಯವರ ಕಿರುಕುಳವನ್ನು ಸಹಿಸಲಾಗದು. ಜೀವನದಲ್ಲಿ ರಾಜಿಯಾಗಿ ಬದುಕಬೇಕೆಂದು ಎಲ್ಲರೂ ಹೇಳುತ್ತಾರೆ, ಆದರೆ ನನ್ನ ನೋವು ಯಾರಿಗೂ ಅರ್ಥವಾಗುತ್ತಿಲ್ಲ. ನಾನು ಈ ಜೀವನವನ್ನು ಇಷ್ಟಪಡುವುದಿಲ್ಲ,” ಎಂದು ರಿಧಾನ್ಯಾ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಈ ಧ್ವನಿ ಸಂದೇಶಗಳು ರಿಧಾನ್ಯಾರ ಆತ್ಮಹತ್ಯೆಗೆ ಕಾರಣವಾದ ಕಿರುಕುಳದ ತೀವ್ರತೆಯನ್ನು ಬಿಂಬಿಸುತ್ತವೆ.
ರಿಧಾನ್ಯಾರ ತಂದೆ ಅಣ್ಣಾದೊರೈ, ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಾಲೀಕರು, ತಮ್ಮ ಮಗಳ ಸಾವಿಗೆ ಕಾರಣರಾದವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ತಿರುಪ್ಪೂರು ಪೊಲೀಸರು ಗಂಡ ಕವಿನ್ ಕುಮಾರ್, ಅತ್ತೆ ಚಿತ್ರಾದೇವಿ ಮತ್ತು ಮಾವ ಈಶ್ವರ ಮೂರ್ತಿಯನ್ನು ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್ 85ರಡಿ ವರದಕ್ಷಿಣೆ ಕಿರುಕುಳ ಆರೋಪದಡಿ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ವರದಕ್ಷಿಣೆ:
ರಿಧಾನ್ಯಾರ ದುರಂತವು ವರದಕ್ಷಿಣೆಯಿಂದ ಉಂಟಾಗುವ ಸಾಮಾಜಿಕ ಸಮಸ್ಯೆಯ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (NCRB) ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ಮಹಿಳೆ ವರದಕ್ಷಿಣೆ ಕಿರುಕುಳದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 25,000 ವರದಕ್ಷಿಣೆ ಸಂಬಂಧಿತ ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಘಟನೆಯು ಸಮಾಜದಲ್ಲಿ ವರದಕ್ಷಿಣೆ ವಿರುದ್ಧ ಜಾಗೃತಿಯ ಅಗತ್ಯವನ್ನು ಮತ್ತು ಕಾನೂನಿನ ಕಟ್ಟುನಿಟ್ಟಾದ ಜಾರಿಯನ್ನು ಒತ್ತಿಹೇಳುತ್ತದೆ. ರಿಧಾನ್ಯಾರಂತಹ ಯುವತಿಯರ ದುರಂತವು ಈ ಪಿಡುಗಿನಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಗಂಟೆಯಾಗಿದೆ.





