ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ತಿಳಿಸಿದೆ. ಆಗಸ್ಟ್ 1, 2025 ರಿಂದ ಬೆಸ್ಕಾಂ ಕಚೇರಿಗಳಲ್ಲಿರುವ ಎನಿ ಟೈಮ್ ಪೇಮೆಂಟ್ (ATP) ಯಂತ್ರಗಳ ಮೂಲಕ ವಿದ್ಯುತ್ ಬಿಲ್ ಪಾವತಿ ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಈ ನಿರ್ಧಾರದಿಂದ ಸಿಲಿಕಾನ್ ಸಿಟಿಯ ಗ್ರಾಹಕರು ವಿದ್ಯುತ್ ಬಿಲ್ ಪಾವತಿಗೆ ಪರ್ಯಾಯ ವಿಧಾನಗಳನ್ನು ಅವಲಂಬಿಸಬೇಕಾಗಿದೆ.
BESCOM ಪ್ರಕಾರ, ಗ್ರಾಹಕರು ಉಪವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕ ಬಿಲ್ ಪಾವತಿಸಬಹುದು. ಇದರ ಜೊತೆಗೆ, ಆನ್‌ಲೈನ್ ಪಾವತಿ ವಿಧಾನಗಳಾದ ಬೆಸ್ಕಾಂ ವೆಬ್‌ಸೈಟ್ (www.bescom.karnataka.gov.in), ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಭೀಮ್ ಆ್ಯಪ್‌ಗಳ ಮೂಲಕವೂ ಬಿಲ್ ಪಾವತಿ ಸಾಧ್ಯವಿದೆ. ಇದಲ್ಲದೆ, ಸ್ಪಾಟ್ ಬಿಲ್ಡಿಂಗ್ ಡಿವೈಸ್, ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBPS), NEFT, ECS ವಿಧಾನಗಳೂ ಲಭ್ಯವಿವೆ.
ಈ ಬದಲಾವಣೆಯಿಂದ ಗ್ರಾಹಕರಿಗೆ ಆನ್‌ಲೈನ್ ಪಾವತಿಗೆ ಒತ್ತು ನೀಡಲಾಗಿದ್ದು, ಡಿಜಿಟಲ್ ವಿಧಾನಗಳನ್ನು ಜನಪ್ರಿಯಗೊಳಿಸುವ ಉದ್ದೇಶವಿದೆ. ಆದರೆ, ಆನ್‌ಲೈನ್ ವಿಧಾನಗಳ ಬಗ್ಗೆ ಅರಿವಿಲ್ಲದವರಿಗೆ ಅಥವಾ ತಾಂತ್ರಿಕ ಸಮಸ್ಯೆ ಎದುರಿಸುವವರಿಗೆ ಈ ಬದಲಾವಣೆ ತೊಂದರೆಯಾಗಬಹುದು. BESCOM ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.