ಬೆಂಗಳೂರು, ಡಿಸೆಂಬರ್ 1: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ವಿಪರೀತ ಚಳಿ ಕಾಡುತ್ತಿತ್ತು. ಆದರೆ ಭಾನುವಾರ ಸ್ವಲ್ಪ ಮಳೆಯಾದ ಕಾರಣ ಚಳಿಯ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ. ಇಂದು ಸಂಜೆಯೂ ಮಳೆಯ ನಿರೀಕ್ಷೆ ಇದ್ದು, ಮುಂದಿನ ಏಳು ದಿನಗಳಲ್ಲಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳು ಮಳೆಯ ಆರ್ಭಟಕ್ಕೆ ಸಾಕ್ಷಿಯಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ನಗರ, ಬೆ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಈ 13 ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆಯ ಸಾಧ್ಯತೆ ಇದೆ. ಭಾನುವಾರ ಸಂಜೆಯೇ ಬೆಂಗಳೂರು ನಗರ ಮತ್ತು ರಾಯಲಪಾಡು ಪ್ರದೇಶದಲ್ಲಿ ಮಳೆ ಬಂದಿದ್ದು, ರಸ್ತೆಗಳಲ್ಲಿ ನೀರು ನಿಂತಿವೆ.
ಕರಾವಳಿ ಭಾಗದಲ್ಲಿ ಡಿಸೆಂಬರ್ 5ರ ನಂತರ ಮಳೆ ಆರಂಭವಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ವಾರದಿಂದ ಮಳೆಯ ನಿರೀಕ್ಷೆ ಇದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದೆ.. ಬೀದರ್, ಗದಗ, ಹಾವೇರಿ, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರ, ಧಾರವಾಡ ಮತ್ತು ಬೆಳಗಾವಿಯಲ್ಲಿ ಮಾತ್ರ ಒಣಹವೆಯೇ ಇರಲಿದೆ.
ಉಷ್ಣಾಂಶದ ಮಾಹಿತಿ
ಉತ್ತರ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ ಮತ್ತಷ್ಟು 2-3 ಡಿಗ್ರಿ ಕಡಿಮೆಯಾಗುವ ಸಾಧ್ಯತೆ ಇದೆ. ವಿಜಯಪುರ ಮತ್ತು ಧಾರವಾಡದಲ್ಲಿ ಕನಿಷ್ಠ 12.5° ಸೆಲ್ಸಿಯಸ್ ದಾಖಲಾಗಿ ರಾಜ್ಯದ ಅತಿ ಕಡಿಮೆ ತಾಪಮಾನ ಎಂಬ ಗೌರವಕ್ಕೆ ಪಾತ್ರವಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ 21.4-23.4° ಮತ್ತು ಕನಿಷ್ಠ 16.8-18.4° ಸೆಲ್ಸಿಯಸ್ ನಡುವೆ ಉಳಿದಿದೆ. ಕರಾವಳಿಯಲ್ಲಿ ಮಂಗಳೂರು, ಹೊನ್ನಾವರ, ಕಾರವಾರದಲ್ಲಿ ಗರಿಷ್ಠ 30-32° ಸೆಲ್ಸಿಯಸ್ ಇದ್ದರೂ ರಾತ್ರಿಯಲ್ಲಿ 20-22° ಸೆಲ್ಸಿಯಸ್‌ಗೆ ಇಳಿಯುತ್ತಿದೆ.
ಈ ಮಳೆಯಿಂದ ರೈತರಿಗೆ ಒಳ್ಳೆಯ ಸುದ್ದಿ ಎನ್ನುವಂತಾಗಿದೆ. ರಾಗಿ, ಜೋಳ, ತೊಗರಿ ಬೆಳೆಗಳಿಗೆ ಈ ಸಮಯದ ಮಳೆ ಅಮೃತ ಸಮಾನ. ಆದರೆ ನಗರ ಪ್ರದೇಶದಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್, ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆಯೂ ಉಂಟಾಗುತ್ತಿದೆ. ಹವಾಮಾನ ಇಲಾಖೆ ಎಲ್ಲರಿಗೂ ಎಚ್ಚರಿಕೆ ನೀಡಿದ್ದು, ಮಳೆಯ ಸಂದರ್ಭದಲ್ಲಿ ಗುಡುಗು-ಸಿಡಿಲು ಇದ್ದರೆ ಮರದ ಕೆಳಗೆ, ತೆರೆದ ಪ್ರದೇಶದಲ್ಲಿ ನಿಲ್ಲಬೇಡಿ ಎಂದು ಸೂಚಿಸಿದೆ.
ಡಿಸೆಂಬರ್ ಆರಂಭವೇ ಕರ್ನಾಟಕಕ್ಕೆ ಮಳೆಯ ಉಡುಗೊರೆಯಾಗಿ ಬಂದಿದೆ. ಬೆಂಗಳೂರಿನ ಜನರಿಗೆ ಚಳಿಯಿಂದ ಸ್ವಲ್ಪ ನಿರಾಳ, ರೈತರಿಗೆ ಬೆಳೆಗೆ ಬಲ, ಪ್ರಕೃತಿ ಪ್ರಿಯರಿಗೆ ಆನಂದದ ಸಮಯ. ಮುಂದಿನ ಒಂದು ವಾರ ಮೋಡ ಕವಿದ ವಾತಾವರಣ, ತಂಪು ಮತ್ತು ಮಳೆ ಇರಲಿದೆ. ಕರ್ನಾಟಕದಲ್ಲಿ ಈ ಚಳಿಗಾಲ ಈ ಬಾರಿ ಭಿನ್ನವಾಗಿ ಕಂಡುಬರಲಿದೆ.





