ಬೆಂಗಳೂರು ( ಜುಲೈ 29 ) : ಸಿಲಿಕಾನ್ ಸಿಟಿಯಲ್ಲಿ ಹದಗೆಟ್ಟ ರಸ್ತೆಗಳು ಮತ್ತು ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ನಡುವೆ ಪೀಣ್ಯ ಸಮೀಪದ ರುದ್ರಪ್ಪ ಲೇಔಟ್‌ನ ನಿವಾಸಿ, ಎಂಜಿನಿಯರ್ ಹಾಗೂ ಉದ್ಯಮಿ ಧನಂಜಯ ಭಂಡಾರ್ಕರ್ ತಮ್ಮ ಬಡಾವಣೆಯ ರಸ್ತೆ ಸಮಸ್ಯೆ ಬಗ್ಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಧನಂಜಯ ಭಂಡಾರ್ಕರ್ ಅವರು ಧೂಳು, ಕಲ್ಲು ಹಾಗೂ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲೇ ರನ್ನಿಂಗ್ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸಿದ್ದಾರೆ. ಸುಮಾರು ಒಂದು ದಶಕದ ಹಿಂದೆ ನಿರ್ಮಾಣಗೊಂಡ ರುದ್ರಪ್ಪ ಲೇಔಟ್‌ನಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಆದರೆ 1.7 ಕಿ.ಮೀ. ಉದ್ದದ ರಸ್ತೆಯಲ್ಲಿ ಕೇವಲ ಮೊದಲ 200 ಮೀಟರ್‌ಗೆ ಮಾತ್ರ ಡಾಂಬರು ಹಾಕಲಾಗಿದ್ದು, ಉಳಿದ 1.5 ಕಿ.ಮೀ. ರಸ್ತೆ ಕಳೆದ ಎರಡು ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲೇ ಉಳಿದಿದೆ.
ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರೂ, ಕಾಮಗಾರಿ ಮುಗಿದು ವರ್ಷ ಕಳೆದರೂ ರಸ್ತೆ ಅಭಿವೃದ್ಧಿ ಮಾತ್ರ ಆಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಮೂಲಕ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಧನಂಜಯ ಈ ವಿಭಿನ್ನ ಪ್ರತಿಭಟನೆಗೆ ಮುಂದಾಗಿದ್ದಾರೆ. ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಗಮನ ಸೆಳೆಯುವುದೇ ತಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
“ರಸ್ತೆ ಗುಂಡಿಗಳ ಬಗ್ಗೆ ಮಾತನಾಡುವ ವಿಡಿಯೋಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದಕ್ಕಾಗಿಯೇ ರನ್ನಿಂಗ್ ಮೂಲಕ ಜನರ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದೇನೆ. ರಸ್ತೆ ಡಾಂಬರೀಕರಣವಾಗುವವರೆಗೆ ನನ್ನ ಹೋರಾಟ ಮುಂದುವರಿಯುತ್ತದೆ,” ಎಂದು ಧನಂಜಯ ಹೇಳಿದ್ದಾರೆ. ಅಗತ್ಯವಿದ್ದರೆ ಮುಂದಿನ ಬಾರಿ ಹ್ಯಾಂಡ್‌ಸ್ಟ್ಯಾಂಡ್ ಮಾಡಿ ಪ್ರತಿಭಟನೆ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ.





