ಬೆಂಗಳೂರು, ಅಕ್ಟೋಬರ್ 29: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮರಗಳು ಕಣ್ಮರೆಯಾಗುತ್ತಿರುವುದು ಒಂದೆಡೆಯಾದರೆ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೂರನೇ ಹಂತದ ಮೆಟ್ರೋ ಕಾಮಗಾರಿಗಾಗಿ ಸಾವಿರಾರು ಮರಗಳನ್ನು ಕಡಿಯಲು ಮುಂದಾಗಿದೆ. ಈ ಕ್ರಮವು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಿತ್ತಳೆ ಮಾರ್ಗದ (Orange Line) ಕಾಮಗಾರಿಗಾಗಿ 1,092 ಮರಗಳನ್ನು ಕಡಿಯಲು ಅಥವಾ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದ್ದು, ಈ ವಿಷಯವು ನಗರದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದ್ದು, ಇದರಿಂದ ನಗರದ ತಾಪಮಾನ ಏರಿಕೆಯಾಗಿ, ಗಾಳಿಯ ಗುಣಮಟ್ಟ ಕುಸಿದಿದೆ. ಈಗ ಮತ್ತೆ, ಮೆಟ್ರೋದ ಮೂರನೇ ಹಂತದ ಯೋಜನೆಯಡಿ, ಒಟ್ಟು 44.65 ಕಿಲೋಮೀಟರ್ ಉದ್ದದ ಎರಡು ಕಾರಿಡಾರ್‌ಗಳಿಗಾಗಿ 1,092 ಮರಗಳನ್ನು ಕಡಿಯಲು ಅಥವಾ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಮೊದಲ ಕಾರಿಡಾರ್ ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.15 ಕಿಲೋಮೀಟರ್ ಉದ್ದವಿದ್ದು, 21 ನಿಲ್ದಾಣಗಳನ್ನು ಒಳಗೊಂಡಿದೆ. ಎರಡನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.50 ಕಿಲೋಮೀಟರ್ ಉದ್ದವಿದ್ದು, 9 ನಿಲ್ದಾಣಗಳನ್ನು ಹೊಂದಿದೆ. ಈ ಯೋಜನೆಗೆ 15,611 ಕೋಟಿ ರೂಪಾಯಿಗಳ ವೆಚ್ಚದ ಅಂದಾಜು ಮಾಡಲಾಗಿದೆ.
ಪರಿಸರವಾದಿಗಳು ಮತ್ತು ಸ್ಥಳೀಯ ನಿವಾಸಿಗಳು ಈ ಕಾಮಗಾರಿಯಿಂದಾಗಿ ಮರಗಳ ಕಡಿತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ನಿವಾಸಿಯಾದ ಇನಾಯತ್ ಮಾತನಾಡಿ, ಮೆಟ್ರೋ ಕಾಮಗಾರಿಯಿಂದ ಸಂಚಾರ ಸೌಲಭ್ಯ ಸಿಗುವುದು ಸಂತೋಷದ ವಿಷಯ. ಆದರೆ, ಇರುವ ಮರಗಳನ್ನೆಲ್ಲ ಕಡಿದರೆ ಶುದ್ಧ ಗಾಳಿಯಿಲ್ಲದೆ ಉಸಿರಾಡುವುದು ಹೇಗೆ ? ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಡಬೇಕೆಂಬ ನಿಯಮವನ್ನು ಬಿಎಂಆರ್‌ಸಿಎಲ್ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ, ಕಿತ್ತಳೆ ಮಾರ್ಗದ ಕಾಮಗಾರಿಗಾಗಿ 11,000 ಮರಗಳನ್ನು ಕಡಿಯಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿತ್ತು. ಆದರೆ, ಪರಿಸರವಾದಿಗಳ ತೀವ್ರ ಆಕ್ಷೇಪದಿಂದಾಗಿ ಈ ಸಂಖ್ಯೆಯನ್ನು 6,500ಕ್ಕೆ ಇಳಿಸಲಾಯಿತು. ಆದರೂ, ಪರಿಸರವಾದಿಗಳು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದೀಗ, ಮೂರನೇ ಹಂತದ ಕಾಮಗಾರಿಗಾಗಿ 2,183 ಮರಗಳನ್ನು ಕಡಿಯಲು ಅಥವಾ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ಜಿಬಿಎ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಅರಣ್ಯ ವಿಭಾಗದಿಂದ ಅನುಮತಿ ಕೋರಿದೆ. ಇದರಲ್ಲಿ ಮೊದಲ ಹಂತವಾಗಿ 1,092 ಮರಗಳನ್ನು ಕಡಿಯಲು ಅನುಮತಿ ದೊರೆತಿದ್ದು, ಒಟ್ಟಾರೆ 10,045 ಮರಗಳು ಮೆಟ್ರೋ ಕಾಮಗಾರಿಯಿಂದ ಪ್ರಭಾವಿತವಾಗಲಿವೆ.
ಪರಿಸರವಾದಿ ಅರುಣ್ ಈ ಬಗ್ಗೆ ಮಾತನಾಡಿ, ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಡಬೇಕೆಂಬ ನಿಯಮವಿದೆ. ಆದರೆ, 1,000 ಮರಗಳ ಬದಲಿಗೆ 10,000 ಗಿಡಗಳನ್ನು ಎಲ್ಲಿ ನೆಡಲಾಗುವುದು ? ಈ ಹಿಂದೆ ಕಡಿದ ಮರಗಳಿಗೆ ಬದಲಿಯಾಗಿ ನೆಟ್ಟ ಗಿಡಗಳ ಗತಿಯೇನು ? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಶುದ್ಧ ಗಾಳಿಯ ಕೊರತೆ ಎದುರಾಗಿದ್ದು, ಮರಗಳ ಕಡಿತದಿಂದಾಗಿ ನಗರವು ದೆಹಲಿಯಂತಹ ವಾಯು ಮಾಲಿನ್ಯದ ಕೇಂದ್ರವಾಗುವ ಆತಂಕವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.





