ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಬಂಧಿತ ವಾಯುಮಂಡಲಕ್ಕೆ ಅನಧಿಕೃತವಾಗಿ ಒಂದು ಏರ್ ಬಲೂನ್ ಪ್ರವೇಶಿಸಿದ ಘಟನೆ ಸಂಭವಿಸಿದೆ.. ಕೆಲಕಾಲ ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಭಯ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು.
ವಿಮಾನ ನಿಲ್ದಾಣದ ಆವರಣದಲ್ಲಿ ಏಕಾಏಕಿ ಆಕಾಶದಲ್ಲಿ ತೇಲುತ್ತಿರುವ ಬಲೂನ್ ಕಂಡುಬಂದಿದ್ದು, ಇದು ಡ್ರೋನ್ ಅಥವಾ ಶಂಕಾಸ್ಪದ ವಸ್ತುವಾಗಿರಬಹುದೆಂಬ ಅನುಮಾನಗಳು ಮೊದಲಿಗೆ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ತಕ್ಷಣ ಕಟ್ಟುನಿಟ್ಟುಗೊಳಿಸಲಾಯಿತು.
ಪ್ರಾಥಮಿಕ ತನಿಖೆಯಲ್ಲಿ ಈ ಬಲೂನ್ ಯಾವುದೇ ಉಗ್ರ ಕೃತ್ಯಕ್ಕೆ ಸಂಬಂಧಪಟ್ಟದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಹೊಸಕೋಟೆ ಮೂಲದ ಖಾಸಗಿ ನಿರ್ಮಾಣ ಕಂಪನಿಯೊಂದು ಜಾಹೀರಾತು ಅಥವಾ ಪ್ರಚಾರ ಉದ್ದೇಶಕ್ಕಾಗಿ ಏರ್ ಬಲೂನ್ ಹಾರಿಸಿದ್ದು, ನಿಯಂತ್ರಣ ತಪ್ಪಿ ಅದು ಕೆಂಪೇಗೌಡ ವಿಮಾನ ನಿಲ್ದಾಣದ ವಾಯುಮಂಡಲಕ್ಕೆ ಪ್ರವೇಶಿಸಿದೆ ಎಂದು ತಿಳಿದುಬಂದಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ನಿಯೋಜಿತವಾಗಿದ್ದ ಸಿಐಎಸ್‌ಎಫ್ (CISF) ಸಿಬ್ಬಂದಿ ತಕ್ಷಣ ಎಚ್ಚರಿಕೆ ವಹಿಸಿ, ಬಲೂನ್ ಅನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಯಿತು. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಈ ಕುರಿತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ. ಸದ್ಯ ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ತಾಂತ್ರಿಕ ದೋಷ, ನಿರ್ಲಕ್ಷ್ಯ ಅಥವಾ ನಿಯಮ ಉಲ್ಲಂಘನೆಯಿಂದ ಈ ಘಟನೆ ಸಂಭವಿಸಿರಬಹುದೆಂಬ ಎಲ್ಲಾ ಆಯಾಮಗಳಿಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಖಾಸಗಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಂಪನಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದರೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





