ಬೆಂಗಳೂರು, ಜ.14: ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport – KIA) 2025ರಲ್ಲಿ ಇತಿಹಾಸ ನಿರ್ಮಿಸಿದೆ. ಪ್ರಯಾಣಿಕರ ಓಡಾಟ, ಸರಕು ಸಾಗಣೆ, ಕಾರ್ಯಕ್ಷಮತೆ ಹಾಗೂ ತಂತ್ರಜ್ಞಾನ ಬಳಕೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಏರ್‌ಪೋರ್ಟ್ ಮೆಚ್ಚುಗೆಗೆ ಪಾತ್ರವಾಗಿದೆ. 2025ರಲ್ಲೇ ಒಟ್ಟು 4.3 ಕೋಟಿ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ್ದು, ಇದು ಕಳೆದ ವರ್ಷಕ್ಕಿಂತ 8 ಶೇಕಡಾ ಹೆಚ್ಚಳವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಎರಡರಲ್ಲಿಯೂ ನಿರಂತರ ಏರಿಕೆ ಕಂಡಿದೆ. ಈ ಪೈಕಿ 28.7 ಶೇಕಡಾ ಅಂತಾರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣವನ್ನು ಬಳಸಿಕೊಂಡಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದ್ದು, ದಿನನಿತ್ಯದ ಅಂತಾರಾಷ್ಟ್ರೀಯ ನಿರ್ಗಮನಗಳ ಸಂಖ್ಯೆ 38ರಿಂದ 51ಕ್ಕೆ ಹೆಚ್ಚಳವಾಗಿದೆ.
ಪ್ರಯಾಣಿಕರ ಓಡಾಟದ ಜೊತೆಗೆ ವಿಮಾನ ನಿಲ್ದಾಣದ ದೈನಂದಿನ ಚಟುವಟಿಕೆಗಳಲ್ಲೂ ದಾಖಲೆಗಳು ನಿರ್ಮಾಣವಾಗಿವೆ. 2025ರ ನವೆಂಬರ್ 23ರಂದು ಒಂದೇ ದಿನದಲ್ಲಿ 1,37,317 ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸಿದ್ದು, ಇದು ಇದುವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಅದೇ ರೀತಿ, ಅಕ್ಟೋಬರ್ 19, 2025ರಂದು ಗರಿಷ್ಠ 837 ಏರ್ ಟ್ರಾಫಿಕ್ ಮೂವ್‌ಮೆಂಟ್‌ಗಳು ದಾಖಲಾಗಿದೆ..
ಸರಕು ಸಾಗಣೆಯ ಕ್ಷೇತ್ರದಲ್ಲಿಯೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹೊಸ ಮೈಲಿಗಲ್ಲು ಸ್ಥಾಪಿಸಿದೆ. 2025ರಲ್ಲಿ ಒಟ್ಟು 5,20,985 ಟನ್ ಸರಕುಗಳನ್ನು ನಿರ್ವಹಿಸಿದ್ದು, ಇದು ಹಿಂದಿನ ವರ್ಷಕ್ಕಿಂತ 5 ಶೇಕಡಾ ಬೆಳವಣಿಗೆಯಾಗಿದೆ. ಒಂದೇ ದಿನದಲ್ಲಿ 2,207 ಟನ್‌ಗಳಷ್ಟು ಗರಿಷ್ಠ ಸರಕು ಸಾಗಣೆ ನಡೆಯುವ ಮೂಲಕ ವಿಮಾನ ನಿಲ್ದಾಣವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇ-ಕಾಮರ್ಸ್, ಔಷಧೋದ್ಯಮ, ತಂತ್ರಜ್ಞಾನ ಹಾಗೂ ರಫ್ತು-ಆಮದು ಚಟುವಟಿಕೆಗಳ ಬೆಳವಣಿಗೆ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
2025ರ ಅವಧಿಯಲ್ಲಿ ಬೆಂಗಳೂರು ಏರ್‌ಪೋರ್ಟ್ ತನ್ನ ಜಾಲತಾಣವನ್ನು ವಿಸ್ತರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. 5 ದೇಶೀಯ ಮತ್ತು 5 ಅಂತಾರಾಷ್ಟ್ರೀಯ ಸೇರಿ ಒಟ್ಟು 10 ಹೊಸ ಮಾರ್ಗಗಳು ಆರಂಭಗೊಂಡಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ ಹಾಗೂ ಸುಲಭ ಸಂಪರ್ಕವನ್ನು ಒದಗಿಸಿದೆ.
ಈ ಎಲ್ಲ ಸಾಧನೆಗಳ ನಡುವೆಯೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಮಹತ್ವದ ಗೌರವವೂ ಲಭಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (Airports Council International – ACI) ನೀಡುವ ಪ್ರವೇಶ ವರ್ಧಕ ಮಾನ್ಯತೆ (Accessibility Enhancement Accreditation – AEA) ಕಾರ್ಯಕ್ರಮದಡಿ ಎಸಿಐನ 3ನೇ ಹಂತದ ಮಾನ್ಯತೆ ಪಡೆದಿದೆ. ಈ ಮಾನ್ಯತೆಗೆ ಭಾಜನವಾದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಕೆಐಎಎಲ್ (KIAL) ಪಡೆದುಕೊಂಡಿದೆ.





