ಕೋಲ್ಕತ್ತಾದಿಂದ ಕೆಲಸದ ಹುಡುಕಾಟದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯೊಬ್ಬರ ಮೇಲೆ ಏಳು ಜನ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಈ ಗಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಯ ಹುಡುಕಾಟ ನಡೆಯುತ್ತಿದೆ.
ಬಂಧಿತ ಆರೋಪಿಗಳನ್ನು ನವೀನ್, ಕಾರ್ತಿಕ್, ಶುಯೋಗ್, ಸೀನ್, ಜಂಗ್ಲಿ ಮತ್ತು ಪೃಥ್ವಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ಥಳೀಯರಾಗಿದ್ದು, ಗಂಗೊಂಡನಹಳ್ಳಿಯ ಸಮೀಪದಲ್ಲಿ ಮನೆಗೆಲಸ ಮಾಡಿಕೊಂಡಿದ್ದವರು ಎಂದು ತಿಳಿದುಬಂದಿದೆ. ಏಳನೇ ಆರೋಪಿಯಾದ ಮಿಥುನ್ ತಲೆಮರೆಸಿಕೊಂಡಿದ್ದು, ಅವನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಈ ಘಟನೆಯು ಬೆಂಗಳೂರು ಹೊರವಲಯದ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಕೋಲ್ಕತ್ತಾ ಮೂಲದ ಮಹಿಳೆಯೊಬ್ಬರು ಇತ್ತೀಚೆಗೆ ಕೆಲಸದ ಹುಡುಕಾಟದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಆರೋಪಿಗಳು ಪೀಣ್ಯ ಪೊಲೀಸ್ ಠಾಣೆಯ ಇನ್‌ಫಾರ್ಮರ್‌ಗಳಂತೆ ತೋರಿಕೊಂಡು, ಮಹಿಳೆಯ ಮನೆಗೆ ಕಂಠಪೂರ್ತಿ ಕುಡಿದ ಸ್ಥಿತಿಯಲ್ಲಿ ನುಗ್ಗಿದ್ದಾರೆ. ನಿಮ್ಮ ಮನೆಯಲ್ಲಿ ಡ್ರಗ್ಸ್ ಇದೆ, ಕೊಡಿ ಎಂದು ಆರೋಪಿಸಿ, ಮನೆಯೊಳಗೆ ಬಲವಂತವಾಗಿ ಪ್ರವೇಶಿಸಿದ್ದಾರೆ.
ಆರೋಪಿಗಳು ಮಹಿಳೆಯ ಮೊಬೈಲ್ ಫೋನ್ ಮತ್ತು 50 ಸಾವಿರ ರೂಪಾಯಿ ನಗದನ್ನು ಕಸಿದುಕೊಂಡಿದ್ದಾರೆ. ಇದೇ ವೇಳೆ, ಮನೆಯಲ್ಲಿದ್ದ ಒಬ್ಬ ಪುರುಷನನ್ನು ಬ್ಯಾಟ್‌ನಿಂದ ಥಳಿಸಿ ಕಟ್ಟಿಹಾಕಿದ್ದಾರೆ. ಬಳಿಕ, ಮಹಿಳೆಯನ್ನು ಎಳೆದೊಯ್ದು, ಸಮೀಪದ ಮನೆಯೊಂದಕ್ಕೆ ಕರೆದೊಯ್ದು, ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಇದಕ್ಕೆ ಸಂಬಂದಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದು, ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376D , 395 , ಮತ್ತು 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.




